-->
High Court - ಅಪ್ರಾಪ್ತೆ ಜೊತೆ ಸಮ್ಮತಿಸಿದ ದೈಹಿಕ ಸಂಪರ್ಕವೂ ಕಾನೂನುಬಾಹಿರ: ಹೈಕೋರ್ಟ್ ಮಹತ್ವದ ಆದೇಶ

High Court - ಅಪ್ರಾಪ್ತೆ ಜೊತೆ ಸಮ್ಮತಿಸಿದ ದೈಹಿಕ ಸಂಪರ್ಕವೂ ಕಾನೂನುಬಾಹಿರ: ಹೈಕೋರ್ಟ್ ಮಹತ್ವದ ಆದೇಶ


ಬೆಂಗಳೂರು: 17 ವರ್ಷ ವಯಸ್ಸಿನ ಅಪ್ರಾಪ್ತ ವಯಸ್ಕಳ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ ಯುವಕನಿಗೆ ಮೂರನೇ ಬಾರಿಯೂ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದ್ದು, ಸಮ್ಮತಿಯ ದೈಹಿಕ ಫೋಕ್ಸೋ ಕಾಯ್ದೆ ಪ್ರಕಾರ ಅಪ್ರಾಪ್ತೆ ಜೊತೆಗೆ ಸಮ್ಮತಿಪೂರ್ವಕ ಮಾಡಲಾದ ದೈಹಿಕ ಸಂಪರ್ಕವೂ ಕಾನೂನು ಸಮ್ಮತವಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಪ್ರಶಾಂತ್ ಎಂಬ ಯುವಕನ ವಿರುದ್ಧ 2019ರ ನವೆಂಬರ್ 8ರಂದು ಬೆಂಗಳೂರಿನ ಅಪ್ರಾಪ್ತ ವಯಸ್ಕ ಸಂತ್ರಸ್ತೆಯ ಪೋಷಕರು ದೂರು ನೀಡಿದ್ದರು.


ಅಪಹರಣ ಹಾಗೂ ಚಿಕ್ಕಬಳ್ಳಾಪುರದ ಕಂಜೇನಹಳ್ಳಿಯಲ್ಲಿ 2019ರ ನವೆಂಬರ್ 8ರಿಂದ 20ರವರೆಗೆ ಅಕ್ರಮವಾಗಿ ಗೃಹ ಬಂಧನದಲ್ಲಿಟ್ಟು ಆಕೆಯೊಂದಿಗೆ ಹಲವು ಬಾರಿ ದೈಹಿಕ ಸಂಪರ್ಕ ಮಾಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಈ ದೂರನ್ನು ತನಿಖೆ ನಡೆಸಿದ್ದ ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 363, 366, 376 ಹಾಗೂ ಫೋಕ್ಸೋ ಕಾಯ್ದೆಯ ಸೆಕ್ಷನ್ 6ರಡಿ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದರು.


ತನಿಖೆ ನಡೆಸಿದ ಪೊಲೀಸರು ನಗರದ ಸೆಷನ್ಸ್ ಕೋರ್ಟ್ ಗೆ ಈ ಪ್ರಕರಣದ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆ ಬಳಿಕ ಆರೋಪಿ ಪ್ರಶಾಂತ್ 4ನೇ ಹೆಚ್ಚುವರಿ ಕೋರ್ಟ್ ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ. ಆದರೆ ಕೋರ್ಟ್ ನಿರಾಕರಿಸಿತ್ತು.


ಆ ಬಳಿಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ಆದರೆ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಇದೀಗ ಮತ್ತೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರೂ ಕೋರ್ಟ್ ಜಾಮೀನು ನಿರಾಕರಿಸಿದೆ.
 

ಕೋರ್ಟ್ ಮುಂದೆ ಆರೋಪಿ ಮಾಡಿದ ವಾದವೇನು..?


ತಾನು ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದೇವೆ. ನಾವಿಬ್ಬರೂ ಪರಸ್ಪರ ಒಪ್ಪಿಗೆಯಿಂದಲೇ ದೈಹಿಕ ಸಂಪರ್ಕ ನಡೆಸಿದ್ದೇವೆ. ಪೊಲೀಸ್ ಚಾರ್ಜ್ ಶೀಟ್ ನಲ್ಲಿ ಸ್ವ-ಇಚ್ಛೆಯಿಂದಲೇ ಯುವಕನೊಂದಿಗೆ ಹೋಗಿರುವುದಾಗಿ ಹೇಳಿದ್ದಾಳೆ. ಹಾಗಾಗಿ ಜಾಮೀನು ನೀಡಬೇಕು ಎಂದು ಯುವಕ ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾನೆ.

 
ಹೈಕೋರ್ಟ್ ಹೇಳಿದ್ದೇನು?


ಆರೋಪಿ ಯುವಕನ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ.ಕೆ.ಎಸ್.ಮುದಕಲ್ ಅವರಿದ್ದ ಏಕ ಸದಸ್ಯ ಪೀಠ, ಯುವಕ ತಾನು ಯುವತಿಯೊಂದಿಗೆ ಸಮ್ಮತಿ ಪಡೆದು ಒಪ್ಪಿತ ಲೈಂಗಿಕ ಸಂಪರ್ಕ ನಡೆಸಿದ್ದಾಗಿ ವಾದಿಸಿದ್ದಾನೆ.


ವಾದವನ್ನು ಆಲಿಸಿದ ನ್ಯಾಯಪೀಠ, ಅಪ್ರಾಪ್ತೆಯ ಸಮ್ಮತಿ, ಕಾನೂನು ರೀತಿಯಲ್ಲಿ ಸಮ್ಮತಿ ಎನಿಸಿಕೊಳ್ಳುವುದಿಲ್ಲ. ಫೋಕ್ಸೋ ಕಾಯ್ದೆಯನ್ನು ಅಪ್ರಾಪ್ತರ ಕಲ್ಯಾಣಕ್ಕಾಗಿಯೇ ಜಾರಿ ಮಾಡಲಾಗಿದೆ ಎಂದು ಹೇಳಿತು. ಅಲ್ಲದೆ, ಅಪ್ರಾಪ್ತೆಯ ಸಮ್ಮತಿ ಪಡೆದುಕೊಂಡಿದ್ದೇನೆ ಎನ್ನುವುದು ಕಾನೂನು ಸಮ್ಮತವಲ್ಲ ಎಂದು ಹೇಳುವ ಮೂಲಕ ಯುವಕನ ಜಾಮೀನು ಅರ್ಜಿ ನಿರಾಕರಿಸಿದೆ.

Ads on article

Advertise in articles 1

advertising articles 2

Advertise under the article