ಇತ್ತೀಚೆಗೆ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಲೋನಿಯಲ್ಲಿ ಪ್ರಾಯಸ್ತ ವೃದ್ದ ಮುಸ್ಲಿಮ್ ವ್ಯಕ್ತಿ ಅಬ್ದುಲ್ ಸಮದ್ ರವರು, ತನ್ನ ದಿನವಹಿ ಆರಾಧನೆಗೆ ಆಟೋ ರಿಕ್ಷಾ ಒಂದರಲ್ಲಿ ತೆರಳುತ್ತಿರುವಾಗ ಅದೇ ರಿಕ್ಷಾ ಹತ್ತಿದ ಇಬ್ಬರು ದುಷ್ಕರ್ಮಿಗಳು ಅಬ್ದುಲ್ ಸಮದ್ ರವರನ್ನು ಅಜ್ಞಾತ ಸ್ಥಳವೊಂದಕ್ಕೆ ಬಲವಂತವಾಗಿ ಎಳೆದುಕೊಂಡು ಹೋಗಿ ಅವರ ಗಡ್ಡ ಬೋಳಿಸಿ, ಹಲ್ಲೆ ನಡೆಸಿ, ಬಹಳಷ್ಟು ಹಿಂಸಿಸಿದ ದುಷ್ಕೃತ್ಯ ನಡೆದಿದ್ದು ಉತ್ತರ ಪ್ರದೇಶದಲ್ಲಿ ಪದೇ ಪದೇ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷರಾದ ಮಾಜಿ ಮೇಯರ್ ಅಶ್ರಫ್ ಆರೋಪಿಸಿದ್ದಾರೆ.
ಯೋಗಿ ಆದಿತ್ಯ ನಾಥ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಉತ್ತರ ಪ್ರದೇಶ ರಾಜ್ಯವು ಗೂಂಡಾ ರಾಜ್ಯವಾಗಿ ಮಾರ್ಪಾಡು ಗೊಂಡಿದೆ. ಇಲ್ಲಿ ದಲಿತರ ಮೇಲೆ, ಹಿಂದುಳಿದವರ ಮೇಲೆ, ಅಲ್ಪಸಂಖ್ಯಾತರ ಮೇಲೆ ಆಗಾಗ ಆಕ್ರಮಣಗಳು ನಡೆಯುತ್ತಲೇ ಇದೆ. ಆದರೂ ಕೇಂದ್ರ ಸರ್ಕಾರ ಚಕಾರವೆತ್ತುತ್ತಿಲ್ಲ ಎಂದು ಅವರು ಹೇಳಿದ್ಧಾರೆ.
ಇಲ್ಲಿ ಸಿ.ಎ.ಎ. ವಿರುದ್ಧ ಪ್ರತಿಭಟನೆ ನಡೆಸಿದ, ರೈತ ಹೋರಾಟದಲ್ಲಿ ಭಾಗವಹಿಸಿದ, ಆಕ್ಸಿಜನ್ ಗೆ ಆಗ್ರಹಿಸಿದ, ಕೋರೋಣ ನಿಯಂತ್ರಣ ಅಪೇಕ್ಷಿಸಿದ ಅದೆಷ್ಟೋ ಅಮಾಯಕರನ್ನು ದೇಶ ದ್ರೋಹ ಪ್ರಕರಣಗಳಲ್ಲಿ ಬಂಧಿಸಿ ಅವರ ಮೇಲೆ ದೌರ್ಜನ್ಯ ನಡೆಸಲಾಗಿದೆ. ಯೋಗಿ ರಾಜ್ಯದಲ್ಲಿ ಇಂತಹ ಘಟನೆಗಳನ್ನೇ ನಿರೀಕ್ಷಿಸಲು ಸಾಧ್ಯ. ಜನರ ಹಕ್ಕುಗಳನ್ನು ಸಂಪೂರ್ಣವಾಗಿ ಕಸಿಯುತ್ತಿರುವ ಯೋಗಿ ರಾಜ್ಯ ರಾವಣ ರಾಜ್ಯವಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಈ ಅನ್ಯಾಯ, ಅನಾಚಾರದ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆಯಬೇಕಾಗಿದೆ ಎಂದು ಅವರು ಕರೆ ನೀಡಿದರು.
ವೃದ್ದ ವ್ಯಕ್ತಿಯ ಮೇಲಿನ ಹಲ್ಲೆ ಖಂಡನೀಯ. ದುಷ್ಕರ್ಮಿ ಗಳಿಗೆ ಕೂಡಲೇ ಶಿಕ್ಷೆ ಆಗಬೇಕು ಎಂದು ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷರಾದ ಮಾಜಿ ಮೇಯರ್ ಅಶ್ರಫ್ ಒತ್ತಾಯಿಸಿದ್ದಾರೆ.
