ಕೊರೋನಾ ಮಹಾಮಾರಿ ಮತ್ತೆ ಜನ ಜೀವನಕ್ಕೆ ಸಂಕಟವನ್ನು ತಂದಿಟ್ಟಿದೆ. ಸೋಂಕಿತ ಸರಣಿಯನ್ನು ಮುರಿಯಲು ರಾಜ್ಯ ಸರ್ಕಾರ ಲಾಕ್‌ಡೌನ್, ಜನತಾ ಕರ್ಫ್ಯು ಎಂದೆಲ್ಲ ಹೆಸರು ಇಟ್ಟು ಜನರು ಹೊರಬರದಂತೆ ತಡೆದಿದ್ದಾರೆ.
ದಿನದ ಸಂಬಳವನ್ನೇ ನೆಚ್ಚಿಕೊಂಡು ದುಡಿದು ಬದುಕುವ ಜನರು ಮಾತ್ರ ಇದರಿಂದ ಕಂಗಾಲಾಗಿದ್ಧಾರೆ. ಮನೆಯಲ್ಲಿ ಕುಳಿತು ದಿಕ್ಕೆಟ್ಟು ದಿನ ಕಳೆಯುತ್ತಿದ್ದಾರೆ. ಏನು ಮಾಡಬೇಕು ಎಂದೇ ತೋಚುತ್ತಿಲ್ಲ.
ಕಳೆದ ಬಾರಿ ದಿನಸಿ ಕಿಟ್, ಮೊರೆಟೋರಿಯಂ, ಸಾಲ ಸೌಲಭ್ಯ ಎಂದೆಲ್ಲ ಆರ್ಥಿಕ ಪ್ಯಾಕೇಜ್‌ಗಳ ಸುರಿಮಳೆ ಸುರಿಸಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಾರಿ ತುಟಿಬಿಚ್ಚಿಲ್ಲ.
ಸಾಲ ಇಲ್ಲದ ವ್ಯಕ್ತಿ ಇಲ್ಲ ಎಂಬಂತೆ ಪ್ರತಿ ಮನೆಯಲ್ಲೂ ಸಾಲ ಪಡೆಯದವರು ಇಲ್ಲ.
ದಿನ ಕಳೆದಂತೆ ಕ್ಯಾಲೆಂಡರ್‌ನಲ್ಲಿ ತಿಂಗಳು ಬದಲಾಯಿಸುವಾಗ ಇಎಂಐ ಎಂಬ ಭೂತ ಜನರನ್ನು ಕಾಡುತ್ತಿದೆ. ಮೊಬೈಲ್‌ಗೆ ಬರುವ ಮೆಸ್ಸೇಜ್, ಖಾಯಿ ಆಗಿರುವ ಬ್ಯಾಂಕ್ ಖಾತೆ... ಇಎಂಐ ಕಂತು ಕಟ್ಟದಿದ್ದರೆ ಪೆನಾಲ್ಟಿ... ಇದನ್ನು ನಿರ್ಲಕ್ಷ್ಯ ಮಾಡಿದರೆ ವಕೀಲರ ನೋಟೀಸ್, ಕೋರ್ಟ್ ಕೇಸ್ ತಪ್ಪಿದ್ದಲ್ಲ.
ಇದೆಲ್ಲ ಆಗಿರುವುದು ಲಾಕ್‌ಡೌನ್ ಎಂಬ ಒತ್ತಡದ ಬಂದ್‌ನಿಂದ. ಚುನಾವಣೆ ಬಂತು ಎಂದರೆ ಸಾಕು ಓಟು ಕೇಳಲು ಕೈಮುಗಿದುಕೊಂಡು ಬಾಗಿಲಿಗೆ ಬರುವ ರಾಜಕಾರಣಿಗಳು ಕೈಚೆಲ್ಲಿದ್ದಾರೆ.
ದಯವಿಟ್ಟು ಇವರ ಸಮಸ್ಯೆಯನ್ನು ಅರಿತುಕೊಳ್ಳುವ ಸರ್ಕಾರ, ಜನಪ್ರತಿನಿಧಿಗಳು ನಮಗೆ ಬೇಕು... ಎಲ್ಲ ಸರಿ, ಸೋಂಕಿನ ಸರಪಣಿಯನ್ನು ಮುರಿಯಬೇಕು. ಕೊರೋನಾ ವಿರುದ್ಧ ಗೆಲ್ಲಬೇಕು... ಅದರ ಜೊತೆ ಜೀವನ ಪೂರ್ತಿ ಸಾಲದ ನಂಟಿನಿಂದ ಬಿಡುಗಡೆಯಾಗಲು ಏನಾದರೂ ಪರಿಹಾರವನ್ನು ಸರ್ಕಾರಗಳು ಕಂಡುಕೊಳ್ಳಬೇಕು.
