-->
Dr Srinivas Kakkillaya Tips | ಕೊರೋನ ಸಂಕಷ್ಟ: ನಮ್ಮ ತುರ್ತು ಬೇಡಿಕೆಗಳೇನು?- ಡಾ. ಶ್ರೀನಿವಾಸ ಕಕ್ಕಿಲ್ಲಾಯ

Dr Srinivas Kakkillaya Tips | ಕೊರೋನ ಸಂಕಷ್ಟ: ನಮ್ಮ ತುರ್ತು ಬೇಡಿಕೆಗಳೇನು?- ಡಾ. ಶ್ರೀನಿವಾಸ ಕಕ್ಕಿಲ್ಲಾಯ


ಕೊರೋನ ಸಂಕಷ್ಟವನ್ನು ನಿಭಾಯಿಸುವುದಕ್ಕೆ ಅಗತ್ಯವಾದ ಕ್ರಮಗಳ ಬಗ್ಗೆ ಕರ್ನಾಟಕದ ರಾಜಕೀಯ ಮತ್ತು ರಾಜಕೀಯೇತರ ಸಂಘಟನೆಗಳು ತುರ್ತಾಗಿ ಮಂಡಿಸಬೇಕಾದ ಬೇಡಿಕೆಗಳು

ಕೊರೋನ ಪ್ರಕರಣಗಳು ಮತ್ತೆ ಬಹಳಷ್ಟು ಏರುತ್ತಿದ್ದು, ಸಾವಿರಾರು ಜನರಲ್ಲಿ ಸಮಸ್ಯೆಗಳಾಗಿ ವೈದ್ಯಕೀಯ ಆಮ್ಲಜನಕದ ಅಗತ್ಯವು ಹೆಚ್ಚಾಗಿದೆ. 


ರಾಜ್ಯದಲ್ಲಿ ಅಲ್ಲಲ್ಲಿರುವ ಉಕ್ಕಿನ ಕಾರ್ಖಾನೆಗಳು, ಪೆಟ್ರೋಲಿಯಂ ಸಂಸ್ಕರಣಾ ಉದ್ಯಮಗಳು, ಇತರ ಬೃಹತ್ ಉದ್ದಿಮೆಗಳು, ರಸಗೊಬ್ಬರ ಕಾರ್ಖಾನೆಗಳು, ಕೆಲವು ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕವನ್ನು ಉತ್ಪಾದಿಸುತ್ತಿವೆ, ದ್ರವೀಕರಿಸಿ ಶೇಖರಿಸುತ್ತಿವೆ; ನೆರೆಹೊರೆಯ ರಾಜ್ಯಗಳಲ್ಲೂ ಇಂಥವು ಸಾಕಷ್ಟಿವೆ. ಇವುಗಳಿಂದ ದ್ರವೀಕೃತ ಆಮ್ಲಜನಕವನ್ನು ಸಂಗ್ರಹಿಸಿ ಆಮ್ಲಜನಕವನ್ನು ವೈದ್ಯಕೀಯ ಬಳಕೆಗಾಗಿ ಸಿಲಿಂಡರ್‌ಗಳಲ್ಲಿ ತುಂಬಿಸಿ ಆಸ್ಪತ್ರೆಗಳಿಗೆ ಪೂರೈಸುವ ಸಂಸ್ಥೆಗಳಿಗೆ ತಲುಪಿಸಬೇಕಾಗುತ್ತದೆ ಮತ್ತು ಆ ಸಂಸ್ಥೆಗಳಲ್ಲಿ ಅದನ್ನು ಸಂಗ್ರಹಿಸಿಡಬೇಕಾಗುತ್ತದೆ. ದ್ರವೀಕೃತ ಆಮ್ಲಜನಕದ ಸಾಗಾಣಿಕೆಗೆ ವಿಶೇಷವಾದ ಕ್ರಯೋ ಟ್ಯಾಂಕರ್‌ಗಳು ಬೇಕಾಗುತ್ತವೆ ಮತ್ತು ಅದನ್ನು ಶೇಖರಿಸಿಡುವುದಕ್ಕೆ ವಿಶೇಷ ಟ್ಯಾಂಕ್‌ಗಳು ಬೇಕಾಗುತ್ತವೆ. ಕಳೆದ ಒಂದು ವರ್ಷದಲ್ಲಿ ಕೊರೋನ ಸೋಂಕು ತಾಂಡವವಾಡುತ್ತಿದ್ದರೂ ಇವನ್ನೆಲ್ಲ ಒದಗಿಸಲು ಸಿದ್ಧತೆಗಳನ್ನು ಮಾಡಿಲ್ಲದೇ ಇರುವ ಕಾರಣಕ್ಕೆ ಇಂದು ಆಸ್ಪತ್ರೆಗಳಿಗೆ ಆಮ್ಲಜನಕವನ್ನು ಪೂರೈಸಲು ತೊಡಕಾಗುತ್ತಿದೆ. ಈಗ ಆಮ್ಲಜನಕದ ಪೂರೈಕೆಯನ್ನು ಸಂಪೂರ್ಣವಾಗಿ ಕೇಂದ್ರ ಸರಕಾರವೇ ನಿಯಂತ್ರಿಸುವಂತಾಗಿದ್ದು, ನಮ್ಮದೂ ಸೇರಿದಂತೆ ಎಲ್ಲಾ ರಾಜ್ಯಗಳೂ ಕೇಂದ್ರ ಸರಕಾರದ ಮುಂದೆ ಕೈಜೋಡಿಸಬೇಕಾದ ಸ್ಥಿತಿಯುಂಟಾಗಿದೆ, ಕೇಂದ್ರವೇ ಆಮ್ಲಜನಕ ಕೊಡುವುದೇನೋ ಎಂಬಂತಾಗಿ ಅದಕ್ಕೆ ಕೃತಜ್ಞತೆ ಸಲ್ಲಿಸಬೇಕಾದಂಥ ಸ್ಥಿತಿಯುಂಟಾಗಿದೆ. ಒಂದೊಂದೇ ರಾಜ್ಯಗಳು ಉಚ್ಚ ನ್ಯಾಯಾಲಯಗಳ ಮೊರೆ ಹೋಗುತ್ತಿದ್ದು, ನ್ಯಾಯಾಲಯಗಳು ಆಮ್ಲಜನಕವನ್ನು ಒದಗಿಸುವಂತೆ ಕೇಂದ್ರ ಸರಕಾರಕ್ಕೆ ತಾಕೀತು ಮಾಡುತ್ತಿವೆ; ಕರ್ನಾಟಕದ ಮಾನ್ಯ ಉಚ್ಚ ನ್ಯಾಯಾಲಯವೂ ರಾಜ್ಯಕ್ಕೆ ದಿನಕ್ಕೆ 1200 ಟನ್ ಆಮ್ಲಜನಕವನ್ನು ನೀಡಬೇಕೆಂದು ಆದೇಶಿಸಿದೆ, ಆದರೆ ಕೇಂದ್ರ ಸರಕಾರವು ಇದೀಗ ಅದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದೆ. ಜೀವರಕ್ಷಕ ಆಮ್ಲಜನಕವನ್ನೂ ಕೇಂದ್ರ ಸರಕಾರವೇ ನಿಯಂತ್ರಿಸುವುದೆಂಬ ವ್ಯವಸ್ಥೆಯನ್ನು ಈ ಕೂಡಲೇ ತೆಗೆದು ಹಾಕಿ, ಆಯಾ ರಾಜ್ಯಗಳು ತಮ್ಮಲ್ಲಿ ಸಿದ್ಧಗೊಳ್ಳುವ ಆಮ್ಲಜನಕವನ್ನು ತಾವಾಗಿ ವಿವೇಚನೆಯಿಂದ ಬಳಸಿಕೊಳ್ಳುವುದಕ್ಕೆ ಮತ್ತು ಇತರ ರಾಜ್ಯಗಳೊಂದಿಗೆ ತಮ್ಮೊಳಗೆ ಪೂರೈಕೆಯನ್ನು ಹಂಚಿಕೊಳ್ಳುವುದಕ್ಕೆ ಅನುಕೂಲವಾಗುವಂತೆ ಆಮ್ಲಜನಕದ ವಿತರಣೆಯ ವ್ಯವಸ್ಥೆಯನ್ನು ಈ ಕೂಡಲೇ ವಿಕೇಂದ್ರೀಕರಿಸಬೇಕು, ರಾಜ್ಯಗಳು ತಮ್ಮೊಳಗೆ ಸಹಕರಿಸಿಕೊಂಡು ಆಮ್ಲಜನಕವನ್ನು ಹಂಚಿಕೊಳ್ಳುವುದಕ್ಕೆ ಅವಕಾಶವಾಗಬೇಕು.

ಕೇಂದ್ರ ಸರಕಾರವು ದೇಶದ ಎಲ್ಲಾ ಜನರಿಗೆ ಲಸಿಕೆಯನ್ನು ಉಚಿತವಾಗಿ ನೀಡುವುದಕ್ಕೆ ವ್ಯವಸ್ಥೆಗಳನ್ನು ಮಾಡುತ್ತಿರುವುದಾಗಿ ಕಳೆದ ಡಿಸೆಂಬರ್ 21ರಂದು ದಿಲ್ಲಿ ಎಐಐಎಂಎಸ್ ನಿರ್ದೇಶಕರಾದ ಡಾ. ರಣದೀಪ್ ಗುಲೆರಿಯ ಹೇಳಿದ್ದರೆ, 21-22ರ ಕೇಂದ್ರ ಬಜೆಟ್ ನಲ್ಲಿ ಲಸಿಕೆ ನೀಡುವುದಕ್ಕಾಗಿ 35000 ಕೋಟಿ ಒದಗಿಸಿರುವ ಬಗ್ಗೆ ವಿವರಿಸಿದ ಕೇಂದ್ರ ವಿತ್ತ - ವ್ಯಯ ವಿಭಾಗದ ಕಾರ್ಯದರ್ಶಿ ಟಿ ವಿ ಸೋಮನಾಥನ್ ಅವರು ಈ ಹಣದಿಂದ 50 ಕೋಟಿ ಜನರಿಗೆ ಲಸಿಕೆಗಳನ್ನು ನೀಡಲು ಸಾಧ್ಯವೆಂದೂ, ಇನ್ನೂ ಹೆಚ್ಚಿನವರಿಗೆ ಲಸಿಕೆ ನೀಡುವ ಸಂದರ್ಭದಲ್ಲಿ ಅದಕ್ಕೂ ಸಾಕಷ್ಟು ಹಣವನ್ನು ಒದಗಿಸಲಾಗುವುದೆಂದೂ ಹೇಳಿದ್ದರು. 


ಅಂದರೆ, ದೇಶದ ಎಲ್ಲರಿಗೂ ಕೇಂದ್ರ ಸರಕಾರವೇ ಉಚಿತವಾಗಿ ಲಸಿಕೆಗಳನ್ನು ನೀಡುವ ಮತ್ತು ಅದಕ್ಕೆ ಬೇಕಾದ ಎಲ್ಲಾ ಹಣವನ್ನು ಒದಗಿಸುವ ಭರವಸೆಯನ್ನು ನೀಡಿತ್ತು. ಆದರೆ ಈಗ ಕೇಂದ್ರ ಸರಕಾರವು ಅದರಿಂದ ಹಿಂದೆ ಸರಿದು 18-45 ರೊಳಗಿನವರು ತಮ್ಮ ಖರ್ಚಿನಲ್ಲೇ ಖಾಸಗಿಯಾಗಿ ಲಸಿಕೆಯನ್ನು ಪಡೆಯಬೇಕು, ರಾಜ್ಯಗಳು ಬೇಕಿದ್ದರೆ ತಲಾ 400-600 ರೂ ದರ ತೆತ್ತು ಪಡೆಯಬೇಕು ಎಂದು ಹೇಳಿದೆ. ಕೇಂದ್ರ ಸರಕಾರವು ಹೀಗೆ ತನ್ನ ಭರವಸೆಯಿಂದ, ಜವಾಬ್ದಾರಿಯಿಂದ ವಿಮುಖವಾಗಿರುವುದನ್ನು ನಮ್ಮ ರಾಜ್ಯ ಸರಕಾರವು ವಿರೋಧಿಸಬೇಕು, ಮತ್ತು ಎಲ್ಲರಿಗೂ ಉಚಿತವಾಗಿ ಲಸಿಕೆಯನ್ನು ಒದಗಿಸುವುದಾಗಿ ಈ ಹಿಂದೆ ನೀಡಿದ್ದ ಭರವಸೆಯನ್ನು ಈಡೇರಿಸುವಂತೆ ಒತ್ತಾಯಿಸಬೇಕು.ಈ ಬಾರಿಯ ರಾಜ್ಯ ಆಯವ್ಯಯದಲ್ಲಿ ಕೇಂದ್ರದಿಂದ ಬರಬೇಕಿದ್ದ ಸುಮಾರು ರೂ. 15 ಸಾವಿರ ಕೋಟಿಯಷ್ಟು ತೆರಿಗೆಯ ಪಾಲು ಬಂದಿಲ್ಲ ಎಂದು ಹೇಳಲಾಗಿತ್ತು. ಈ ಕೊರೋನ ಸಂಕಷ್ಟವನ್ನು ನಿಭಾಯಿಸುವುದಕ್ಕೆ, ಅದರ ನೆಪದಲ್ಲಿ ಹಾಕಿರುವ ನಿರ್ಬಂಧಗಳಿಂದಾಗಬಹುದಾದ ನಷ್ಟಗಳನ್ನು ಭರಿಸುವುದಕ್ಕೆ ಈ ಬಾಕಿ ಹಣವನ್ನೂ, ಅಷ್ಟೇ ಅಲ್ಲ, ನೆರವಿನ ರೂಪದಲ್ಲಿ ಅದರ ಮೂರು ಪಾಲಿನಷ್ಟಾದರೂ ಹಣವನ್ನು ಕೇಂದ್ರ ಸರಕಾರವು ರಾಜ್ಯಕ್ಕೆ ನೀಡಬೇಕೆಂದು ಒತ್ತಾಯಿಸಬೇಕು.

ರಾಜ್ಯದಲ್ಲಿ ಕೊರೋನ ನಿಯಂತ್ರಿಸುವ ಹೆಸರಿನಲ್ಲಿ ಮತ್ತೆ ಅವೈಜ್ಞಾನಿಕವಾದ, ತರಾತುರಿಯ ನಿರ್ಬಂಧಗಳನ್ನು ಹೇರಲಾಗಿರುವುದು ಕಳೆದ ವರ್ಷವಿಡೀ ಸಂಕಷ್ಟಕ್ಕೆ ತಳ್ಳಲ್ಪಟ್ಟು ಜೀವನ ನಡೆಸುವುದೇ ದುರ್ಭರವೆನಿಸಿದ್ದ ಕನ್ನಡಿಗರನ್ನು ಮತ್ತಷ್ಟು ಆಳದ ಕೂಪಕ್ಕೆ ತಳ್ಳಿದಂತಾಗಿದೆ. ಈಗ ಮಾಡಿರುವ ಲಾಕ್ ಡೌನ್ ನಲ್ಲಿ ಬೆಳಗ್ಗೆ 6-10 ಗಂಟೆಗಳ ನಡುವೆ ಖರೀದಿಸಲು ಅವಕಾಶ ನೀಡಿದ್ದರಿಂದ ಅದು ಫಲ ನೀಡಿಲ್ಲ ಎಂದು ಲಾಕ್ ಡೌನ್ ವೈಫಲ್ಯವನ್ನು ಒಪ್ಪಿಕೊಳ್ಳುತ್ತಲೇ, ಅದಕ್ಕಾಗಿ ಖರೀದಿಯ ಸಮಯವನ್ನು 6ರಿಂದ 9ರವರೆಗೆ ಮಿತಿಗೊಳಿಸಲಾಗುತ್ತಿದೆ ಎನ್ನುವ ನಿರ್ಧಾರವನ್ನು ಕೈಗೊಳ್ಳುವವರಿಗೆ ಕೊರೋನ ಸೋಂಕಿನ ಬಗ್ಗೆಯಾಗಲೀ, ನಮ್ಮ ಜನರ ಜೀವನದ ಬಗ್ಗೆಯಾಗಲೀ ಎಳ್ಳಷ್ಟೂ ಅರಿವಿಲ್ಲ ಎನ್ನುವುದು ಸುಸ್ಪಷ್ಟವಾಗುತ್ತದೆ. ಇಂಥ ಅಸಂಬದ್ಧವಾದ, ತೀರಾ ಅಪ್ರಯೋಜಕವಾದ ನಿರ್ಧಾರಗಳನ್ನು ಈ ಕೂಡಲೇ ಹಿಂಪಡೆಯಬೇಕು ಮತ್ತು ಇಂಥ ಏಕಪಕ್ಷೀಯವಾಗಿ ನಿರ್ಬಂಧಗಳನ್ನು ವಿಧಿಸುತ್ತಿರುವುದರಿಂದ ಆಗುವ ಎಲ್ಲಾ ನಷ್ಟಗಳನ್ನು ಸರಕಾರವೇ ಭರ್ತಿ ಮಾಡಿಕೊಡಬೇಕು ಮತ್ತು ಎಲ್ಲರಿಗೂ ಸೂಕ್ತ ಪರಿಹಾರಗಳನ್ನು ನೀಡಬೇಕು.ಕೊರೋನ ಸೋಂಕಿನ ಬಗ್ಗೆ ಆರಂಭದಿಂದಲೂ ಅವೈಜ್ಞಾನಿಕವಾದ ಕ್ರಮಗಳನ್ನೇ ಪಾಲಿಸಿಕೊಂಡು ಬರಲಾಗಿದ್ದು, ಸೋಂಕಿಲ್ಲದಾಗ ನಿರ್ಬಂಧಗಳನ್ನು ಹೇರಿ, ಸೋಂಕು ಹರಡುತ್ತಿದ್ದಾಗ ತೆಗೆದದ್ದು, ಮೊದಲಲ್ಲಿ ಮಾಡಲಾಗಿದ್ದ ಆಸ್ಪತ್ರೆ ಸೌಲಭ್ಯಗಳನ್ನು ಪ್ರಕರಣಗಳು ಒಂದಿಷ್ಟು ಕಡಿಮೆಯಾದಾಗ ತೆಗೆದು ಹಾಕಿದ್ದು, ಮತ್ತೆ ಏರತೊಡಗಿದಾಗ ಆಸ್ಪತ್ರೆಗಳನ್ನು ವ್ಯವಸ್ಥೆ ಮಾಡುವ ಬದಲಿಗೆ ಲಸಿಕೆ ಹಾಕುವುದಕ್ಕೆ ಆದ್ಯತೆ ನೀಡಿದ್ದು, ಅದಕ್ಕಾಗಿ ಹಿರಿಯ ವಯಸ್ಕರನ್ನು ಆಸ್ಪತ್ರೆಗಳಿಗೆ ಬಂದು ಸಾಲುಗಟ್ಟುವಂತೆ ಮಾಡಿದ್ದು ಎಲ್ಲವೂ ಇಂದಿನ ಸಂಕಷ್ಟಕ್ಕೆ ಕಾರಣಗಳಾಗಿವೆ. ಕೊರೋನ ಬಂದು ಒಂದು ವರ್ಷವಾದರೂ ಸಾಕ್ಷ್ಯಾಧಾರಿತವಾದ ಚಿಕಿತ್ಸಾ ಕ್ರಮವನ್ನು ಕೂಡ ಸಿದ್ಧಪಡಿಸದಿರುವುದರಿಂದ ಹಲವು ಗೊಂದಲಗಳಿಗೂ, ಅನಗತ್ಯವಾದ ವೆಚ್ಚಗಳಿಗೂ ಕಾರಣವಾಗಿದೆ. ಸರಕಾರಕ್ಕೆ ಕಳೆದೊಂದು ವರ್ಷದಿಂದ ಸಲಹೆ ನೀಡುತ್ತಿದೆಯೆನ್ನಲಾದ ತಜ್ಞರ ಸಮಿತಿಯು ಸಂಪೂರ್ಣವಾಗಿ ವಿಫಲವಾಗಿರುವುದು ಸುಸ್ಪಷ್ಟವಾಗಿದ್ದು, ಆ ಸಮಿತಿಯನ್ನು ಈ ಕೂಡಲೇ ಬರ್ಖಾಸ್ತು ಮಾಡಿ, ಸೋಂಕು ತಡೆಯುವಲ್ಲಿ ಪರಿಣತಿಯಿರುವ, ಕೊರೋನಾ ಮತ್ತು ಕರ್ನಾಟಕದ ಜನಜೀವನದ ಬಗ್ಗೆ ಸ್ಪಷ್ಟ ಅರಿವಿರುವ ವಿಶೇಷಜ್ಞರನ್ನು ಸೇರಿಸಿ ಹೊಸದಾಗಿ ಸಮಿತಿಯನ್ನು ರಚಿಸಬೇಕು.

ಎಲ್ಲಕ್ಕಿಂತ ಹೆಚ್ಚಾಗಿ, ಈ ತಜ್ಞರ ಸಮಿತಿಯ ಹೆಸರಲ್ಲಿ, ರಾಜೀವ ಗಾಂಧಿ ಆರೋಗ್ಯ ವಿವಿಯ ಕುಲಪತಿಗಳ ಹಸ್ತಾಕ್ಷರದಲ್ಲಿ ಕಳೆದ ಮೇ 15ರಿಂದ ಪ್ರಕಟಿಸಲಾಗಿರುವ ಕೋವಿಡ್ ಚಿಕಿತ್ಸೆಯ ಮಾರ್ಗಸೂಚಿಯು ಸಂಪೂರ್ಣವಾಗಿ ಅವೈಜ್ಞಾನಿಕವೂ, ಆಧಾರರಹಿತವೂ ಆಗಿದ್ದು, ರಾಜ್ಯದಲ್ಲಿ ಕೋವಿಡ್ ರೋಗಿಗಳಿಗೆ ಅನಗತ್ಯವಾದ ಪರೀಕ್ಷೆಗಳು ಮತ್ತು ಔಷಧಗಳು ಬಲಸಲ್ಪಡುತ್ತಿರುವುದಕ್ಕೆ ಕಾರಣವಾಗಿವೆ. ಇದೇ ಏಪ್ರಿಲ್ 20ರಂದು ಒಂದು ಪರಿಷ್ಕೃತ ಕಾರ್ಯಸೂಚಿಯನ್ನು ಪ್ರಕಟಿಸಿದ ಬಳಿಕ ಮತ್ತೆ ಮೇ 1ರಂದು ಅದನ್ನು ಬದಲಿಸಿ ಮನೆಯಲ್ಲಿ ಉಳಿಯುವವರಿಗೆ ಕ್ಲೋರೋಕ್ವಿನ್ ತೆಗೆದುಕೊಳ್ಳಬೇಕೆಂದು, ಮತ್ತು ತೀರಾ ಅನಗತ್ಯವಾದ ಔಷಧಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿರುವುದು ಈ ತಜ್ಞರೇ ಗೊಂದಲಕ್ಕೀಡಾಗಿ, ಇತರರನ್ನೂ ಗೊಂದಲಕ್ಕೀಡು ಮಾಡಿ, ಜನರನ್ನು ಅಪಾಯಕ್ಕೀಡು ಮಾಡುವಂತೆ ಕಾಣುತ್ತಿದೆ.ಇಂಥ ಅಸಂಬದ್ಧ ಚಿಕಿತ್ಸಾ ಕಾರ್ಯಸೂಚಿಗಳಿಂದಾಗಿ ಬಿಬಿಎಂಪಿ, ಮೆಗ್ಗಾನ್ ಆಸ್ಪತ್ರೆ ಮುಂತಾದ ಸಂಸ್ಥೆಗಳು ಮನೆಯಲ್ಲೇ ಉಳಿದವರು ಸ್ಟೀರಾಯ್ಡ್ ಮಾತ್ರೆಗಳನ್ನು ಸೇವಿಸುವಂತೆ, ಜೊತೆಗೆ ಇನ್ನೂ ಹಲವು ಅಪ್ರಯೋಜಕವಾದ ಔಷಧಗಳನ್ನು ಸೇವಿಸುವಂತೆ ಪಟ್ಟಿಗಳನ್ನೇ ಮುದ್ರಿಸಿ ಹಂಚುತ್ತಿರುವುದು ನಿಜಕ್ಕೂ ಆಘಾತಕಾರಿಯಾಗಿದೆ; ಸೋಂಕಿನ ಆರಂಭದ ಹಂತಗಳಲ್ಲಿ, ಯಾವುದೇ ಸಮಸ್ಯೆಗಳಿಲ್ಲದವರಲ್ಲಿ ಸ್ಟೀರಾಯ್ಡ್ ಬಳಕೆಯಿಂದ ರೋಗವು ಉಲ್ಬಣಿಸುವುದಕ್ಕೆ ಸಹಾಯವಾಗುವುದರಿಂದ ಇಂಥ ಸಲಹೆಗಳು ಅನೇಕರನ್ನು ತೀವ್ರ ಸಮಸ್ಯೆಗಳತ್ತ ತಳ್ಳುವ ಸಾಧ್ಯತೆಗಳಿವೆ. ಆದ್ದರಿಂದ ಇಂಥ ಚಿಕಿತ್ಸಾ ವಿಧಾನಗಳನ್ನು ಈ ಕೂಡಲೇ ಹಿಂಪಡೆದು, ಯಾರೂ ಅವನ್ನು ಬಳಸಬಾರದೆಂದು ಕೂಡಲೇ ಸ್ಪಷ್ಟವಾದ ಹೇಳಿಕೆಗಳನ್ನೂ, ಜಾಹೀರಾತುಗಳನ್ನೂ ಎಲ್ಲಾ ಮಾಧ್ಯಮಗಳಲ್ಲಿ ಪ್ರಕಟಿಸಬೇಕು, ಮತ್ತು ವಿಶ್ವ ಆರೋಗ್ಯ ಸಂಸ್ಥೆ, ಅಮೆರಿಕ, ಬ್ರಿಟನ್, ಯೂರೋಪ್ ಮುಂತಾದೆಡೆ ಬಳಸಲಾಗುತ್ತಿರುವ ಸಾಕ್ಷ್ಯಾಧಾರಿತವಾದ ಚಿಕಿತ್ಸಾಕ್ರಮವನ್ನೇ ಇಲ್ಲೂ ಅಳವಡಿಸಿಕೊಳ್ಳಬೇಕು.

Ads on article

Advertise in articles 1

advertising articles 2

Advertise under the article

holige copy 1.jpg