ಬೆಳ್ತಂಗಡಿ: ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಬಳಿ ಅಪಘಾತ ನಡೆದು, ಇಂಜಿನಿಯರಿಂಗ್ ವಿದ್ಯಾರ್ಥಿನಿಯೋರ್ವಳು ಮೃತಪಟ್ಟು, ಮತ್ತೀರ್ವ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಡಬ ನಿವಾಸಿ ಸುನೀಲ್ ಎಂಬುವವರ ಪುತ್ರಿ ಮೃತ ಅನನ್ಯಾ(21) ಮೃತಪಟ್ಟ ವಿದ್ಯಾರ್ಥಿನಿ. ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಕುವೆಟ್ಟು ಗ್ರಾಮದ ನಿವಾಸಿ ಪೃಥ್ವಿ ರಾವ್ ಗಾಯಾಳು ವಿದ್ಯಾರ್ಥಿನಿ. ಇವರಿಬ್ಬರೂ ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು.
ಇಬ್ಬರೂ ದ್ವಿಚಕ್ರ ವಾಹನದಲ್ಲಿ ಬೆಳ್ತಂಗಡಿಯಿಂದ ಮಂಗಳೂರಿಗೆ ಕಾಲೇಜಿಗೆ ಬರುತ್ತಿದ್ದರು. ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕಾವಳಕಟ್ಟೆಯಿಂದ ಎನ್‌ಸಿ ರೋಡ್‌ಗೆ ಸಾಗುವ ದಾರಿಯಲ್ಲಿ ಸಿಗುವ ಅಪಾಯಕಾರಿ ತಿರುವಿನಲ್ಲಿ ಕಾರೊಂದು ಇವರ ಹೋಂಡಾ ಆಕ್ಟಿವಾಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ರಸ್ತೆಗೆಸೆಯಲ್ಪಟ್ಟಿದ್ದಾರೆ. ಅಪಘಾತದಲ್ಲಿ ಅನನ್ಯಾ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಮತ್ತೋರ್ವ ವಿದ್ಯಾರ್ಥಿನಿ ಪೃಥ್ವಿ ರಾವ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.