ನ್ಯಾಯಾಂಗಕ್ಕೂ ತುಂಬಲಾರದ ನಷ್ಟ ನೀಡಿದ ಕೋವಿಡ್
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ
ಕೋವಿಡ್ ಎರಡನೇ ಅಲೆಗೆ ದೇಶವೇ ಭಾರೀ ದೊಡ್ಡ ಬೆಲೆ ತೆತ್ತಿದೆ. ಎಲ್ಲ ವಿಭಾಗಗಳಲ್ಲೂ ಕೋವಿಡ್ ಆಳವಾದ ಕಂದರವನ್ನೇ ಸೃಷ್ಟಿಸಿದೆ. ಇನ್ನು ನ್ಯಾಯಾಂಗಕ್ಕೂ ದೊಡ್ಡ ಹಾನಿಯನ್ನು ಮಾಡಿದೆ.
ಇದುವರೆಗೆ 2700 ನ್ಯಾಯಾಂಗ ಇಲಾಖೆ ಅಧಿಕಾರಿಗಳು, 106 ಹೈಕೋರ್ಟ್ ನ್ಯಾಯಮೂರ್ತಿಗಳು ಕೋವಿಡ್ 19 ಸೋಂಕನ್ನು ತಗುಲಿಸಿಕೊಂಡಿದ್ದಾರೆ.
ಈ ದಿನದ ವರೆಗೆ ಸುಪ್ರೀಂ ಕೋರ್ಟ್‌ನ 800 ರಿಜಿಸ್ಟ್ರಿ ನೌಕರರು, ಆರು ಮಂದಿ ರಿಜಿಸ್ಟ್ರಾರ್‌ಗಳು ಹಾಗೂ 10 ಹೆಚ್ಚುವರಿ ರಿಜಿಸ್ಟ್ರಾರ್‌ಗಳು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹೇಳಿದ್ಧಾರೆ.
ನ್ಯಾಯಾಂಗ ಕಲಾಪವನ್ನು ಮಾಧ್ಯಮಕ್ಕೆ ತೆರೆದುಕೊಳ್ಳುವ ಡಿಜಿಟಲ್ ವ್ಯವಸ್ಥೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನನಾಡಿದ್ಧಾರೆ.
ಮೂವರು ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ 34 ನ್ಯಾಯಾಂಗ ಇಲಾಖೆ ಅಧಿಕಾರಿಗಳು ಕೊರೋನಾ ವೈರಸ್‌ನಿಂದ ಮೃತಪಟ್ಟಿದ್ದಾರೆ. ಕೋವಿಡ್ ಎಂಬ ಮಹಾಮಾರಿ ದೇಶದ ಪ್ರತಿಯೊಬ್ಬ ವ್ಯಕ್ತಿಯನ್ನೂ ಬಾಧಿಸಿದೆ. ಬಹುತೇಕ ಎಲ್ಲರ ಜೀವನದಲ್ಲೂ ನೋವು ಮತ್ತು ದುಃಖವನ್ನು ಅದು ನೀಡಿದೆ. ಎಪ್ರಿಲ್ 27, 2020ರಂದು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯಲ್ಲಿ ಮೊದಲ ನೌಕರ ಕೋವಿಡ್ ಸೋಂಕಿಗೆ ಒಳಗಾಗಿದ್ದರು ಎಂಬುದನ್ನು ರಮಣ ನೋವಿನಿಂದ ನೆನೆಪಿಸಿಕೊಂಡಿದ್ದಾರೆ.
ನಮಗೆ ಇದುವರೆಗೆ ದೊರೆತ ಅಂಕಿ ಅಂಶಗಳ ಪ್ರಕಾರ, 2768 ನ್ಯಾಯಾಂಗ ಇಲಾಖೆ ಅಧಿಕಾರಿಗಳು 106 ಮಂದಿ ಹೈಕೋರ್ಟ್ ನ್ಯಾಯಮೂರ್ತಿಗಳು ಕೋವಿಡ್‌ನಿಂದ ನರಳಿದ್ದಾರೆ ಎಂದು ವಿವರಿಸಿದ ಅವರು, ಸಾಕಷ್ಟು ಮುಂಜಾಗರೂಕತೆಗಳನ್ನು ತೆಗೆದುಕೊಂಡಿದ್ದರೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜ. ಡಿ.ವೈ. ಚಂದ್ರಚೂಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ವ್ಯಥೆಪಟ್ಟರು.
