ಸುಳ್ಯ: ಸುಳ್ಯ ಕೊಡಗು ಗಡಿ ಭಾಗದಲ್ಲಿ ಬರುವ ಅರಣ್ಯ ಇಲಾಖೆಯ ಚೆಕ್ ಪೊಸ್ಟ್ ನಲ್ಲಿ, ಹಣ ಕೊಡಿ ಗಾಡಿ ಬಿಡ್ತೀನಿ ಎಂದು ಅಧಿಕಾರಿಯೋರ್ವರು ಹೇಳುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು,ಈ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಚಾಲಕರು ಆಗ್ರಹಿಸಿದ್ದಾರೆ.
ಸುಳ್ಯ ಗಡಿ ಪ್ರದೇಶದ ಸಂಪಾಜೆ ಚೆಕ್ ಪೋಸ್ಟ್ ಮೂಲಕ ದಾಟುವ ಪ್ರತಿಯೊಂದು ಮರ ಅಥವಾ ಮರದ ಉತ್ಪನ್ನಗಳನ್ನು ಸಾಗಿಸುವ ಲಾರಿಗಳು ಸರಿಯಾದ ದಾಖಲೆಗಳನ್ನು ಹೊಂದಿದ್ದರೂ 300 ರೂಪಾಯಿಂದ 500 ರೂಪಾಯಿ ವರೇಗೆ ಚೆಕ್ ಪೋಸ್ಟ್ ಸಿಬ್ಬಂದಿಗೆ ನೀಡಬೇಕೆಂಬುದು ಚಾಲಕರ ಆರೋಪ.
ಇದಕ್ಕೆ ಪೂರಕ ಎಂಬಂತೆ ಅಧಿಕಾರಿಯೋರ್ವರು ಹಣಕ್ಕೆ ಬೇಡಿಕೆಯಿಡುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದೆ.
ಲಾಕ್ ಡೌನ್ ಸಂಕಷ್ಟ ಕಾಲದಲ್ಲೂ ಲಜ್ಜೆಗೆಟ್ಟು ಲಂಚ ಪಡೆಯುತ್ತಿರುವ ಈ ಅಧಿಕಾರಿಗಳ ವಿರುದ್ಧ ಅರಣ್ಯ ಸಚಿವರು ಕ್ರಮ ಕೈಗೊಳ್ಳಬೇಕು ಎಂಬುದಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
