ಪತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂಪೂರ್ಣ ದೃಶ್ಯವನ್ನು ತನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದ ಪತ್ನಿಗೆ ಸೆರೆವಾಸ ಎದುರಾಗಿದೆ. ಹೌದು, ಇಂತಹ ಅಮಾನವೀಯ ಘಟನೆಯೊಂದು ನಡೆದಿರುವುದು ಪಶ್ಚಿಮ ಬಂಗಾಳದ ಹೌರಾದಲ್ಲಿ.
ನೇಹಾ ಎಂಬಾಕೆಯನ್ನು ಐದು ವರ್ಷಗಳ ಕಾಲ ಪ್ರೀತಿಸಿದ್ದ ಅಮನ್ ಶಾ(25) ಎಂಬ ಯುವಕ ಆಕೆಯನ್ನು ಮದುವೆಯಾಗಿ ಸಂಸಾರ ಮಾಡಿಕೊಂಡಿದ್ದ.
ಮದುವೆಯಾದ ಬಳಿಕ ನೇಹಾ ಉದ್ಯೋಗ ತೊರೆದಿದ್ದರು ಮತ್ತು ಅಮನ್ ಸ್ವಂತ ಉದ್ಯಮ ನಡೆಸುತ್ತಿದ್ದರು ಎನ್ನಲಾಗಿದೆ. ಕಳೆದ ಮಾರ್ಚ್ 31ರಂದು ನೇಹಾ ಒಬ್ಬಂಟಿಯಾಗಿ ದಿಲ್ಲಿಗೆ ಪ್ರಯಾಣ ಬೆಳೆಸಿದ್ದರು. ಈ ಘಟನೆ ದಂಪತಿ ಮಧ್ಯೆ ಜಗಳಕ್ಕೆ ಕಾರಣವಾಗಿತ್ತು.
ಅಮನ್ ಕಿರಿಯ ಸಹೋದರಿ ಬರ್ಖಾ ಪ್ರಸಾದ್, ಈ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ತನ್ನ ಅಣ್ಣ ಅಮನ್ ಅತ್ತಿಗೆ ನೇಹಾ ಜೊತೆ ದೆಹಲಿಗೆ ಹೋಗಲು ಬಯಸಿದ್ದ. ಆದರೆ, ಪತ್ನಿಯ ಒಂಟಿ ಪ್ರಯಾಣದಿಂದ ಅಸಮಾಧಾನಗೊಂಡಿದ್ದ ಎನ್ನಲಾಗಿದೆ.
ಆದರೆ, ಪೊಲೀಸರಿಗೆ ನೇಹಾ ಬೇರೆಯೇ ಕಥೆ ಕಟ್ಟಿ ಹೇಳಿಕೆ ನೀಡಿದ್ದಾರೆ. ತನ್ನ ಪತಿ ಹಿಂದೆಯೂ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕವಾಡಿ ತೋರಿಸಿದ್ದರು. ಇದರಿಂದ ಇದನ್ನೇ ಸತ್ಯವೆಂದು ನಂಬಿದ್ದ ತಾನು ಅದನ್ನು ವೀಡಿಯೋ ಮಾಡಿದ್ದೆ ಎಂದು ನೇಹಾ ಹೇಳಿಕೆ ನೀಡಿದ್ದಾರೆ.
ಘಟನೆಯ ಬಗ್ಗೆ ಪೊಲೀಸರು ಎಲ್ಲರ ಹೇಳಿಕೆಯನ್ನೂ ದಾಖಲಿಸಿದ್ದಾರೆ. ಆದರೆ, ಅಮನ್ ಹೆತ್ತವರು ವೆಲ್ಲೋರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಪಡೆದು ಮರಳಿ ಬಂದ ಮೇಲೆ ಹೇಳಿಕೆ ಪಡೆಯುವುದಾಗಿ ಹೇಳಿದ್ದಾರೆ.
ನೇಹಾ ತಮ್ಮ ಹೇಳಿಕೆಯನ್ನು ಪದೇ ಪದೇ ಬದಲಿಸುತ್ತಿದ್ದಾರೆ ಎಂಬುದನ್ನೂ ಹೌರಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
