-->
Expert College during Lockdown | ಲಾಕ್‌ಡೌನ್‌ ನಲ್ಲೂ ಮಕ್ಕಳನ್ನು ಕೂಡಿ ಹಾಕಿದ ಎಕ್ಸ್‌ಪರ್ಟ್‌ ಶಿಕ್ಷಣ ಸಂಸ್ಥೆ: ಪೋಷಕರ ಕಣ್ಣೀರು- ಪೊಲೀಸರ ಕ್ರಮ ಏಕಿಲ್ಲ?

Expert College during Lockdown | ಲಾಕ್‌ಡೌನ್‌ ನಲ್ಲೂ ಮಕ್ಕಳನ್ನು ಕೂಡಿ ಹಾಕಿದ ಎಕ್ಸ್‌ಪರ್ಟ್‌ ಶಿಕ್ಷಣ ಸಂಸ್ಥೆ: ಪೋಷಕರ ಕಣ್ಣೀರು- ಪೊಲೀಸರ ಕ್ರಮ ಏಕಿಲ್ಲ?ಮಂಗಳೂರಿನ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆ ಲಾಕ್ ಡೌನ್ ಸಂದರ್ಭದಲ್ಲಿಯೂ ತಮ್ಮ ಮಕ್ಕಳನ್ನು ಹಾಸ್ಟೆಲ್ ಗಳಲ್ಲಿ ಕೂಡಿ ಹಾಕಿ ತರಗತಿ‌ ನಡೆಸುತ್ತಿವೆ, ಮಕ್ಕಳನ್ನು ತಮ್ಮ ವಶಕ್ಕೆ ಒಪ್ಪಿಸುತ್ತಿಲ್ಲ ಎಂದು ರಾಜ್ಯದ ವಿವಿಧ ಭಾಗಗಳ ಅನುಕೂಲಸ್ಥ ಪೋಷಕರು ಎಕ್ಸ್ ಪರ್ಟ್ ಸಂಸ್ಥೆಯ ಮುಂಭಾಗ ಅಸಹಾಯಕರಾಗಿ ಕಣ್ಣೀರು ‌ಸುರಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪೋಷಕರಲ್ಲಿ ಕೆಲವರು ಧರಣಿಯನ್ನೂ ನಡೆಸಿದ್ದಾರೆ. ಪೊಲೀಸರೂ ಸ್ಥಳಕ್ಕೆ ಬಂದು ಪೋಷಕರಿಗೆ ಬುದ್ದಿ ಹೇಳಿದ್ದಾರೆಯೇ ಹೊರತು ಎಕ್ಸ್ ಪರ್ಟ್ ಆಡಳಿತವನ್ನು‌ ಪ್ರಶ್ನೆ ಮಾಡುವ ಧೈರ್ಯ ತೋರಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ


ಇದರಲ್ಲಿ ವಿಶೇಷ ಏನೂ ಇಲ್ಲ. ಎಕ್ಸ್ ಪರ್ಟ್ ಸೇರಿದಂತೆ ಮಂಗಳೂರಿನ ಪ್ರತಿಷ್ಟಿತ ಎನ್ನಲಾದ ಕೆಲವು ಕಾಲೇಜುಗಳಲ್ಲಿ ತಮ್ಮ ಮಕ್ಕಳಿಗೆ ಸೀಟು ಸಿಕ್ಕಿದರೆ ತಮ್ಮ ಜೀವನ ಪಾವನ, ಮಕ್ಕಳ ಭವಿಷ್ಯ ಉಜ್ವಲ ಎಂಬ ಭಾವ ರಾಜ್ಯದ ಮಧ್ಯಮ, ಮೇಲ್ಮಧ್ಯಮ ವರ್ಗದ ಪೋಷಕರಲ್ಲಿ ತುಂಬಿಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ಧಾರೆ.


ಎಕ್ಸ್‌ಪರ್ಟ್‌ನಿಂದ ಡೊನೇಷನ್ ದಂಧೆ..?


A file video of Expert College...


ಮುನೀರ್ ಅವರು ಹೇಳುವಂತೆ, 90 ಶೇಕಡಾಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳನ್ನಷ್ಟೆ ಸೇರಿಸಿಕೊಂಡು "ಅತ್ಯುತ್ತಮ ಫಲಿತಾಂಶ" ಕೊಡುವ ಈ ಕಾಲೇಜುಗಳು ಅದಕ್ಕಾಗಿ ಲಕ್ಷಾಂತರ ರೂಪಾಯಿ ಡೊನೇಶನ್ ಪೀಕುತ್ತವೆ. ಅಲ್ಲಿಂದ ಮಕ್ಕಳು ಶಿಕ್ಷಣ ಸಂಸ್ಥೆಯ ಸ್ವತ್ತು. ಹೆತ್ತವರಿಗೆ ಯಾವ ಅಧಿಕಾರವೂ ಇಲ್ಲ. ಸಂಸ್ಥೆಯೇ ರೂಪಿಸಿದ ಅಕ್ರಮ ನಿಯಮಗಳ ಪ್ರಕಾರ ಅವರು ನಿಗದಿ ಪಡಿಸಿದ ಸಮಯದಲ್ಲಿ ಫೋನ್ ನಲ್ಲಿ ಮಾತು, ಅವರು ಅವಕಾಶಕೊಟ್ಟಾಗಲಷ್ಟೆ ಕ್ಯಾಂಪಸ್ ನಲ್ಲಿ ಭೇಟಿ, ಅವರು ದಯೆ ತೋರಿದಾಗಲಷ್ಟೆ ಮನೆಗೆ ಕರೆದೊಯ್ಯಲು ಅವಕಾಶ.

ವಿದ್ಯಾರ್ಥಿಗಳಿಗಂತೂ ಬೆಳಿಗ್ಗೆ ಐದರಿಂದ ಶುರುವಾಗಿ ಸರಿ ರಾತ್ರಿವರೆಗೂ ಓದು, ಓದು, ಓದು. ಒಂದು ರೀತಿಯಲ್ಲಿ "ಬಂಧನ ಶಿಬಿರ" ಗಳಂತಹ ದಿನಚರಿ. ಉತ್ತಮ ಶಿಕ್ಷಣದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ತೆತ್ತು ಮಕ್ಕಳನ್ನು ಶಿಕ್ಷೆಗೆ ಗುರಿಪಡಿಸುವ ಈ ವ್ಯಾಪಾರದ ವಿರುದ್ಧ ನಾವು ಹಲವು ಬಾರಿ ಧ್ವನಿ ಎತ್ತಿದರೂ ಪೋಷಕರು ಕಿವಿಗೆ ಹಾಕಿಕೊಳ್ಳದೆ ಕುರಿಗಳಂತೆ ಹಳ್ಳಕ್ಕೆ ಬೀಳುತ್ತಲೇ ಇರುತ್ತಾರೆ. ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳಂತೂ ಈ ಕಾಲೇಜುಗಳ ಧಣಿಗಳ ಜೊತೆ ಗೋಡಂಬಿ, ಬಿಸ್ಕತ್ತು, ಚಾ ಕುಡಿಯುತ್ತಾ ಲೋಕಾಭಿರಾಮ ಮಾತಾಡುವಷ್ಟು ನಿಕಟ ಸಂಬಂಧಿಗಳು.


ಜನರ ಮೇಲೆ ಮಾತ್ರ ಜಿಲ್ಲಾಡಳಿತದ ದರ್ಪವೇ?


ಇರಲಿ, ವಿಷಯ ಅದಲ್ಲ. ಈಗ ಲಾಕ್ ಡೌನ್ ಹೆಸರಲ್ಲಿ ಮದುವೆ, ಮುಂಜಿಗಳನ್ನು ತಡೆ ಹಿಡಿದ, ಸಣ್ಣ ಪುಟ್ಟ ವ್ಯಾಪಾರಿಗಳ ಕಾಲರು ಪಟ್ಟಿ ಹಿಡಿದು ದಂಡ ಹಾಕಿದ, ಮಾಸ್ಕ್ ಹಾಕದ ಕೂಲಿಕಾರರ ಖಾಲಿ ಜೇಬಿಗೆ ಕೈ ಹಾಕಿದ, ಹೆಂಡತಿ ಮಕ್ಕಳ ಹಸಿವು ತಣಿಸಲು ದುಡಿಮೆಯ ಕಡೆಗೆ ಟೂ ವೀಲರ್ ಹತ್ತಿ ಹೊರಟ ಬಡಪಾಯಿಗಳ ಬೆನ್ನಿಗೆ ಬಾರಿಸಿದ ಜಿಲ್ಲಾಡಳಿತ, ಈ ಶಿಕ್ಷಣ ಸಂಸ್ಥೆಗಳ ಧಣಿಗಳ ಮುಂದೆ ಯಾಕೆ ಹ್ಯಾಪು ಮೋರೆ ಹಾಕಿ ನಿಂತಿದೆ. ಪೊಲೀಸರೇಕೆ ಲಾಠಿ ಪಕ್ಕಕ್ಕಿಟ್ಟು ಪೋಷಕರನ್ನೇ ಗದರಿಸುವಂತೆ ಸಮಾಧಾನ ಮಾಡುತ್ತಿದ್ದಾರೆ ? ಎಂದು ಮುನೀರ್ ಪ್ರಶ್ನಿಸಿದ್ದಾರೆ.


ವಿಷಯ ಇಷ್ಟೆ. ಮಂಗಳೂರಿನಲ್ಲಿ ಇರುವುದು ಎರಡೇ ಧರ್ಮ, ಎರಡೇ ಜಾತಿ. ಒಂದು ಜನ ಸಾಮಾನ್ಯರದ್ದು, ಮತ್ತೊಂದು ಧಣಿಗಳದ್ದು. ಅಂದರೆ ಶಿಕ್ಷಣ, ಆರೋಗ್ಯದ ವ್ಯಾಪಾರಿಗಳದ್ದು. ಧಣಿಗಳು ಹೆಚ್ಚು ಸಮಾನರು. ಅವರ ಮುಂದೆ ಲಾಠಿಗಳು ಬಲಹೀನ ವಾಗುತ್ತದೆ. ದಂಡದ ರಶೀದಿಗಳು ದರ್ಬಲಗೊಳ್ಳುತ್ತದೆ. ಅವರು ಆದೇಶಿಸಿದಾಗ ಜನಸಾಮಾನ್ಯರ ವಿರುದ್ದ ಅದು ಉಗ್ರವಾಗಿ ತಿರುಗಿ ಬೀಳುತ್ತದೆ. ಜನಸಾಮಾನ್ಯರ ಧರ್ಮದವರಿಗೆ ಇದೆಲ್ಲ ಅರ್ಥವಾದ ದಿನ ನ್ಯಾಯ ಸಮಾನವಾಗ ತೊಡಗುತ್ತದೆ. ಅದಕ್ಕಾಗಿ ಶಿಕ್ಷಣ, ಅರೋಗ್ಯದ ಖಾಸಗೀಕರಣ, ವ್ಯಾಪಾರೀಕರಣದ ವಿರುದ್ದ ಒಂದಾಗಿ ಧ್ವನಿ ಎತ್ತಬೇಕಾಗಿದೆ ಎಂದು ಮುನೀರ್ ಕಾಟಿಪಳ್ಳ ಕರೆ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article