ಮಂಗಳೂರು ಮತ್ತು ಬಂಟ್ವಾಳದಲ್ಲಿ ಭೀಕರ ಅಪಘಾತ; 6 ಮಂದಿ ಸಾವು

ಮಂಗಳೂರು ಮತ್ತು ಬಂಟ್ವಾಳದಲ್ಲಿ ಭೀಕರ ಅಪಘಾತ

ಮಂಗಳೂರು ಮತ್ತು ಬಂಟ್ವಾಳದಲ್ಲಿ ಭೀಕರ ಅಪಘಾತ; ಆರು ಮಂದಿ ಸಾವು

ಮಂಗಳೂರು: ಮಂಗಳೂರು ತಾಲೂಕಿನ ಪಣಂಬೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಭೀಕರ ಅಪಘಾತ ಪ್ರಕರಣದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ.

ಬಂಟ್ವಾಳದಲ್ಲಿ ಮೂವರು ಸಾವು

ಬಂಟ್ವಾಳ ತಾಲೂಕಿನ ಬಿಸಿರೋಡಿನ ವೃತ್ತದಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟು ಆರು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ಪೀಣ್ಯ ನಿವಾಸಿಗಳಾದ ರವಿ (64) ರಮ್ಯ (23) ಹಾಗೂ ನಂಜಮ್ಮ (75) ಎಂದು ಗುರುತಿಸಲಾಗಿದೆ.

ಉಳಿದಂತೆ ಕೀರ್ತಿ, ಸುಶೀಲಾ, ಬಿಂದು ಹಾಗೂ ಪ್ರಶಾಂತ್ ಅವರು ಗಂಭೀರವಾಗಿ ಗಾಯಗೊಂಡಿದ್ದ ಚಿಂತಾಜನಕ ಸ್ಥಿತಿಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಾಲಕ ಸುಬ್ರಹ್ಮಣ್ಯ ಹಾಗೂ ಕಿರಣ್ ಅವರು ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ.

ಬೆಂಗಳೂರಿನಿಂದ ಇನ್ನೋವಾ ಕಾರಿನಲ್ಲಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಕೃಷ್ಣನ ದರ್ಶನಕ್ಕೆಂದು ಹೊರಟಿದ್ದರು. ಮುಂಜಾನೆ ಸುಮಾರು 4.40 ರ ಸಮಯದಲ್ಲಿ ಬೆಂಗಳೂರಿನ ಕಡೆಯಿಂದ ಬರುತ್ತಿದ್ದ ಕಾರು ಬಿಸಿರೋಡಿನ ಎನ್.ಜಿ.ಸರ್ಕಲ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು ಉಳಿದಂತೆ ಇಬ್ಬರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಘಟನಾ ಸ್ಥಳಕ್ಕೆ ಟ್ರಾಫಿಕ್ ಎಸ್.ಐ. ಸುತೇಶ್ ಹಾಗೂ ಬಂಟ್ವಾಳ ಟ್ರಾಫಿಕ್ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಣಂಬೂರು ಜಂಕ್ಷನ್‌ನಲ್ಲಿ ಮೂವರು ಸಾವು

ಪಣಂಬೂರು ಜಂಕ್ಷನ್‌ನಲ್ಲಿ ನಡೆದ ಅಪಘಾತದಲ್ಲಿ ಮೂರು ಮಂದಿ ಸಾವನ್ನಪ್ಪಿದ್ದಾರೆ. ಮುಹಮ್ಮದ್ ಕುಂಞಿ (25), ಅಬೂಬಕ್ಕರ್ (65), ಮತ್ತು ಇಬ್ರಾಹಿಂ (68) ಮೃತಪಟ್ಟವರು. ಇವರು ಮಂಗಳೂರಿನ ಕೊಣಾಜೆ ಬಳಿಯ ಮೊಂಟೆಪದವು ನಿವಾಸಿಗಳು.

ದನ ಒಂದು ರಸ್ತೆ ದಾಟುತ್ತಿರುವುದನ್ನು ನೋಡಿ ಮುಲ್ಕಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಗ್ಯಾಸ್ ಟ್ಯಾಂಕರ್‌ನ್ನು ಚಲಾಯಿಸುತ್ತಿದ್ದ ಚಾಲಕನು ಲಾರಿ ನಿಲ್ಲಿಸಿದ್ದನು. ಅದರ ಹಿಂದೆ ಬರುತ್ತಿದ್ದ ಆಟೋರಿಕ್ಷಾ ನಿಲ್ಲಿಸಿದಾಗ ಅದರ ಹಿಂದೆ ಇದ್ದಂತಹ ಇನ್ನೋವಾ ಕಾರ್‌ನ ಚಾಲಕನು ಕೂಡ ನಿಲ್ಲಿಸಿದ್ದನು.

ಇದೇ ಸಂದರ್ಭದಲ್ಲಿ ಹಿಂದುಗಡೆಯಿಂದ ಬರುತ್ತಿದ್ದ ಇನ್ನೊಂದು ಟ್ಯಾಂಕರ್ ರಭಸವಾಗಿ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇನೋವಾ ಕಾರ್ ಎಡಗಡೆಗೆ ಹೋಗಿರುತ್ತದೆ ಮತ್ತು ಅದೇ ಸಮಯ ಅಲ್ಲಿ ಇದ್ದ ಆಟೋ ರಿಕ್ಷಾ ಎರಡು ಟ್ಯಾಂಕರ್‌ಗಳ ಮಧ್ಯೆ ಸಿಲುಕಿಕೊಂಡು ಅಪ್ಪಚ್ಚಿ ಯಾಗಿರುತ್ತದೆ.

ಈ ಅಪಘಾತದಲ್ಲಿ ಆಟೋ ರಿಕ್ಷಾ ಚಾಲಕ ಎರಡು ಜನ ಪ್ರಯಾಣಿಕರು ಸೇರಿದಂತೆ 3 ಜನ ಸ್ಥಳದಲ್ಲಿ ಮೃತಪಟ್ಟಿದ್ದಾರೆ.