ಮಂಗಳೂರಿನಲ್ಲಿ ಪ್ರಾಣಿ ದಾಳಿಗೆ 60 ವರ್ಷದ ವ್ಯಕ್ತಿ ಬಲಿ- ನಾಯಿಯ ಮೇಲೆ ಮೂಡಿದೆ ಸಂಶಯ
ಮಂಗಳೂರು: ಪ್ರಾಣಿ ದಾಳಿಗೆ 60 ವರ್ಷದ ವ್ಯಕ್ತಿಯೊಬ್ಬರು ಮಂಗಳೂರಿನಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ನಗರದ ಹೊರವಲಯದ ಕುಂಪಲದ ದಯಾನಂದ (60) ಎಂಬವರು ಮೃತಪಟ್ಟವರು. ಇವರ ದೇಹ ಕುಂಪಲ ಬಳಿ ರಕ್ತಸಿಕ್ತವಾಗಿ ಪತ್ತೆಯಾಗಿದೆ. ಇವರು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅವರು ನಡೆದುಕೊಂಡು ಹೋಗುತ್ತಿದ್ದಾಗ ಅಲ್ಲಿನ ಜನರು ನೋಡಿದ್ದಾರೆ ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ.
ದೇಹದ ಮೇಲಿನ ಗಾಯಗಳು ಪ್ರಾಣಿ ದಾಳಿಯ ಸೂಚನೆ
ಇವರ ದೇಹದ ಮೇಲಿನ ಕೆಲವು ಗಾಯಗಳು ಅವರ ಮೇಲೆ ಪ್ರಾಣಿಯ ದಾಳಿ ನಡೆದಿರುವುದನ್ನು ತೋರಿಸುತ್ತವೆ. ನಾಯಿ ದಾಳಿ ಮಾಡಿರಬಹುದೆಂದು ಶಂಕಿಸಲಾಗಿದೆ.
ಪೊಲೀಸ್ ತನಿಖೆ ಆರಂಭ
ಅಧಿಕಾರಿಗಳು ಸ್ಥಳಕ್ಕೆ ಬಂದು ಸಾವಿಗೆ ಕಾರಣವೇನೆಂದು ಪರಿಶೀಲಿಸಿದ್ದಾರೆ. ಎಫ್‌ಎಸ್‌ಎಲ್ ತಂಡವನ್ನು ನಿಯೋಜಿಸಲಾಗಿದ್ದು ಮತ್ತು ವಿಧಿವಿಜ್ಞಾನ ವೈದ್ಯರ ಅಭಿಪ್ರಾಯವನ್ನು ಪಡೆಯಲಾಗಿದೆ.
ಪೊಲೀಸ್ ಕಮೀಷನರ್ ಹೇಳಿಕೆ
ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ವಿಧಿವಿಜ್ಞಾನ ವೈದ್ಯರು ಭೇಟಿ ನೀಡಿ ಇದು ಪ್ರಾಣಿಗಳ ದಾಳಿಯಿಂದ ಉಂಟಾಗಿದೆ ಎಂದು ದೃಢಪಡಿಸಿದ್ದಾರೆ ಮತ್ತು ಸ್ಥಳೀಯ ಜನರು ಬಾಯಿಯಲ್ಲಿ ರಕ್ತದೊಂದಿಗೆ ನಾಯಿ ಹೋಗುರುವುದನ್ನು ನೋಡಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

