ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳಿಗೆ ಹೆಚ್ಚು ಅಂಕ ಕೊಡುವ ಹಾಗೂ ಉತ್ತಮ ಕೆಲಸ ತೆಗೆಸಿಕೊಡುವ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿ ಉಪನ್ಯಾಸಕ ಭರತ್ ಭಾರ್ಗವ್ ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಭರತ್ ಭಾರ್ಗವ್ ಮೈಸೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಈತ ಅದೇ ಕಾಲೇಜಿನ ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿನಿ ನೀಡಿದ ದೂರಿನಲ್ಲಿ ಉಲ್ಲೇಖವಾಗಿದೆ.
ಹೆಚ್ಚು ಅಂಕ ನೀಡುತ್ತೇನೆ, ಒಳ್ಳೆಯ ಕೆಲಸ ಕೊಡಿಸುತ್ತೇನೆ ಎಂದು ಆಮಿಷ ನೀಡುತ್ತಿದ್ದ. ಪಬ್‌ಗೆ ಹೋಗಿ ಮಜಾ ಮಾಡೋಣ ಬಾ ಎಂದು ಉಪನ್ಯಾಸಕ ಭರತ್ ಭಾರ್ಗವ್ ಕರೆಯುತ್ತಿದ್ದನಂತೆ. ಇಷ್ಟು ಮಾತ್ರವಲ್ಲದೇ ವಿದ್ಯಾರ್ಥಿನಿ ಖಾಸಗಿ ಅಂಗಾಂಗಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.
ಭರತ್ ಭಾರ್ಗವ್ ನೀಡುತ್ತಿದ್ದ ಕಿರುಕುಳದ ಬಗ್ಗೆ ಮಹಿಳಾ ಉಪನ್ಯಾಸಕರಿಗೆ ವಿದ್ಯಾರ್ಥಿನಿ ದೂರು ನೀಡಿದ್ದರು. ದೂರು ನೀಡಿದ್ದಕ್ಕೆ ಕರೆ ಮಾಡಿ ಬೆದರಿಕೆ ಹಾಕಿದ್ದನು. ತಾನು ಹೇಳಿದಂತೆ ಕೇಳದಿದ್ದರೆ ಫೇಲ್ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಇದೀಗ ದೂರು ದಾಖಲಿಸಿರುವ ವಿದ್ಯಾರ್ಥಿನಿ ಉಪನ್ಯಾಸಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ BNS ಸೆಕ್ಷನ್ 126 (2) 75 (2) 351 (2) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.