-->

RBI instruction to Bank customers | ಖಾತೆಯಲ್ಲಿದ್ದ ಹಣ ವಂಚಕರ ಪಾಲಾದರೆ ಬ್ಯಾಂಕ್ ಜವಾಬ್ದಾರಿಯೇ? ಆರ್‌ಬಿಐ ಏನನ್ನುತ್ತೆ..?

RBI instruction to Bank customers | ಖಾತೆಯಲ್ಲಿದ್ದ ಹಣ ವಂಚಕರ ಪಾಲಾದರೆ ಬ್ಯಾಂಕ್ ಜವಾಬ್ದಾರಿಯೇ? ಆರ್‌ಬಿಐ ಏನನ್ನುತ್ತೆ..?




ಬ್ಯಾಂಕಿನಲ್ಲಿದ್ದ ಹಣ ಸೇಫ್ ಎಂಬ ಕಾಲ ಒಂದಿತ್ತು. ಆದರೆ, ಈಗ ಕಾಲ ಬದಲಾಗಿದೆ... ಕೈಯಲ್ಲಿ ಮಚ್ಚು, ಕೋವಿ ಹಿಡಿದು ಕನ್ನ ಹಾಕುವ ದರೋಡೆಗೋರರ ಬದಲು ಚಾಣಾಕ್ಷ ಹ್ಯಾಕರ್‌ಗಳು ಡಿಜಿಟಲ್ ಇಂಡಿಯಾಕ್ಕೆ ಸವಾಲು ಒಡ್ಡುತ್ತಿದ್ದಾರೆ. ಬ್ಯಾಂಕಿನಲ್ಲಿದ್ದ ಸೇಫ್‌ ಹಣ ಕ್ಷಣ ಮಾತ್ರದಲ್ಲಿ ಮಂಗಮಾಯವಾಗುತ್ತದೆ.


ಈ ಬಗ್ಗೆ ಖಚಿತ ಮಾಹಿತಿ ಇದ್ದು ದೂರು ಕೊಡಲು ಹೋದರೆ ಪೊಲೀಸರೂ ಕೈಚೆಲ್ಲುತ್ತಾರೆ. ಇದೆಲ್ಲ ಸಾಮಾನ್ಯ... ನೀವೇಕೆ ನಿಮ್ಮ ಪಾಸ್‌ವರ್ಡ್ ಸುರಕ್ಷಿತವಾಗಿಟ್ಟಿಲ್ಲ ಎಂದು ಸಂತ್ರಸ್ತ ದೂರುದಾರರನ್ನೇ ಗದರುತ್ತಾರೆ.


ಇನ್ನು ಬ್ಯಾಂಕಿನವರೋ... ನಮಗೂ ಖಾತೆಯಲ್ಲಿ ಖಾಲಿಯಾದ ಹಣಕ್ಕೂ ಸಂಬಂಧ ಇಲ್ಲ ಎಂದು ಮುಖ ಇನ್ನೊಂದು ಕಡೆ ತಿರುಗಿಸುತ್ತಾರೆ.


ಈಗ ಇಂತಹ ಬ್ಯಾಂಕಿನವರ ನೆರವಿಗೆ ಸ್ವತಃ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವೇ ಧಾವಿಸಿದೆ. ಹ್ಯಾಕರ್‌ಗಳು ಮತ್ತು ವಂಚಕರ ಕಾರಣದಿಂದ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಖಾಲಿಯಾದರೆ ಬ್ಯಾಂಕ್ ಜವಾಬ್ದಾರಿ ಆಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಈ ಮೂಲಕ, ಬ್ಯಾಂಕ್ ಖಾತೆದಾರರಿಗೆ ಮತ್ತಷ್ಟು ಪೇಚಿಗೀಡಾಗುವಂತೆ ಮಾಡಿದೆ.


ಇತ್ತೀಚೆಗೆ, ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ನಿವೃತ್ತ ಶಿಕ್ಷಕಿಯೊಬ್ಬರು ತಮ್ಮ ಖಾತೆಯಿಂದ ಹಣ ಕಳೆದುಕೊಂಡಿದ್ದರು. ಅಜ್ಞಾತ ವ್ಯಕ್ತಿಗಳು ಹೇಗೋ ಅದನ್ನು ಯಾಮಾರಿಸಿದ್ದರು. ಈ ಬಗ್ಗೆ ಅವರು ಬ್ಯಾಂಕಿಗೆ ದೂರು ನೀಡಿದಾಗ ನಿಮ್ಮ ಹಣಕ್ಕೆ ನಾವು ಜವಾಬ್ದಾರರಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ.


ಈ ಬಗ್ಗೆ ಅವರು ಮೇಲ್ಮನವಿ ನೀಡಿದ್ದು, ಸಿಡಿಆರ್‌ಸಿ ಕೂಡ ಅದೇ ಉತ್ತರ ನೀಡಿ ಸಂತ್ರಸ್ತ ದೂರುದಾರರಿಗೆ ಮತ್ತಷ್ಟು ಆಘಾತ ನೀಡಿದೆ.


ಕಳೆದ 2018ರ ಎಪ್ರಿಲ್‌ನಲ್ಲಿ ಗುಜರಾತ್ ರಾಜ್ಯ ಅಮ್ರೇಲಿ ಜಿಲ್ಲೆಯ ನಿವೃತ್ತ ಶಿಕ್ಷಕಿ ಕುರ್ಜಿ ಜಾವಿಯಾ ಅವರಿಗೆ ಎಸ್‌ಬಿಐ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು ಕರೆ ಮಾಡಲಾಗಿತ್ತು. ಎಟಿಎಂ ಮಾಹಿತಿ ಪಿನ್ ಕೇಳಿದ್ದರು. ಅವರು ಅದನ್ನು ನಂಬಿ ಮಾಹಿತಿ ನೀಡಿದ್ದರು.


ಬಳಿಕ, ಪಿಂಚಣಿ ಹಣ ಬರುತ್ತಿದ್ದಂತೆ ಖದೀಮರು ಅದನ್ನು ಪೂರ್ತಿ ಉಡಾಯಿಸಿದ್ದರು. ಈ ಪ್ರಕರಣದಲ್ಲಿ ಬ್ಯಾಂಕ್‌ ಕಡೆಯಿಂದ ಯಾವುದೇ ತಪ್ಪು ಆಗಿಲ್ಲ ಎಂದು ಹೇಳಿದ ಸಿಡಿಆರ್‌ಸಿ ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾಕ್ಕೆ ಕ್ಲೀನ್ ಚಿಟ್ ನೀಡಿದೆ.


ಬ್ಯಾಂಕ್ ಖಾತೆಯ ಮಾಹಿತಿ ನೀಡದಿರಲು ಆರ್.ಬಿ.ಐ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಗ್ರಾಹಕರು ಮಾಹಿತಿ ನೀಡಿದರೆ ಅವರದ್ದೇ ತಪ್ಪು ಎಂದುಕೊಳ್ಳಲಾಗುವುದು ಎಂದು ಸಿಡಿಆರ್‌ಸಿ ಹೇಳಿಕೊಂಡಿದೆ.


ಗ್ರಾಹಕರು ಇನ್ನಾದರೂ ಎಚ್ಚೆತ್ತುಕೊಂಡು ತಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಜೋಪಾನವಾಗಿಡುವುದು. ನಮ್ಮ ತಲೆ ಮೇಲೆ ನಮ್ಮದೇ ಕೈ... ಜೈ ಡಿಜಿಟಲ್ ಇಂಡಿಯಾ...!

Ads on article

Advertise in articles 1

advertising articles 2

Advertise under the article