ವಿಲೀನಗೊಂಡ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದ ಗ್ರಾಹಕರ ಉಳಿತಾಯ ಖಾತೆಯಿಂದ ಸೇವಾ ಶುಲ್ಕದ ಹೆಸರಿನಲ್ಲಿ ಕ್ರಮವಾಗಿ ತಲಾ ರೂ. 142 ಮತ್ತು ರೂ. 236 ರುಪಾಯಿಂತೆ ಒಟ್ಟು 378 ರೂಪಾಯಿಯನ್ನು ಬ್ಯಾಂಕ್ ಕಡಿತಗೊಳಿಸಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಕೆನರಾ ಬ್ಯಾಂಕ್ ನೊಂದಿಗೆ ಸಿಂಡಿಕೇಟ್ ಬ್ಯಾಂಕನ್ನು ವಿಲೀನ ಮಾಡಿದ್ದ ಕೇಂದ್ರ ಸರಕಾರ, ಸಿಂಡಿಕೇಟ್ ಬ್ಯಾಂಕ್ ನಿಂದ ಕೆನರಾ ಬ್ಯಾಂಕ್ ಗೆ ಗ್ರಾಹಕರ ಖಾತೆ ವರ್ಗಾವಣೆ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿತ್ತು.
ಈಗಾಗಲೇ SMS ಶುಲ್ಕ, ಚೆಕ್ ಬುಕ್ ಶುಲ್ಕ, ATM ಕಾರ್ಡ್ ಶುಲ್ಕ ಹೀಗೆ ಹಲವಾರು ಶುಲ್ಕಗಳನ್ನು ಗ್ರಾಹಕರು ಪಾವತಿಸುತ್ತಾ ಬಂದಿದ್ದಾರೆ. ಅಂಥವರಿಂದ ಬ್ಯಾಂಕ್ ಹೆಚ್ಚುವರಿ ಶುಲ್ಕವನ್ನು ದೋಚುತ್ತಿದೆ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಿನಸಿ ಸಾಮಗ್ರಿ, ವಿದ್ಯುತ್, ಅಡುಗೆ ಅನಿಲ, ನೀರು, ಪೆಟ್ರೋಲ್ ಹೀಗೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನಸಾಮಾನ್ಯರ ಜೇಬಿಗೆ ಮಚ್ಚು ಲಾಂಗಿನಿಂದ ಪ್ರಹಾರ ಮಾಡಲಾಗುತ್ತಿದೆ. ಹೆದ್ದಾರಿ ಬಳಸಿದರೆ ಟೋಲ್ ನೀಡಿ ಸುಸ್ತಾದ ಜನ ಈಗ ಬ್ಯಾಂಕ್ ಖಾತೆಯಿಂದಲೂ ಲೂಟಿ ಎದುರಿಸಬೇಕಾಗಿ ಬಂದಿದೆ.
ಗ್ರಾಹಕರು ಈ ಬಗ್ಗೆ ಬ್ಯಾಂಕಿನ ಅಧಿಕಾರಿಗಳಲ್ಲಿ ದೂರು, ಅರ್ಜಿ, ಮನವಿ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದು, ಅಧಿಕಾರಿಗಳು ಮೇಲಾಧಿಕಾರಿಗಳ ಕಡೆಗೆ ಬೊಟ್ಟು ಮಾಡಿ ಕೈಚೆಲ್ಲಿದ್ದಾರೆ. ಈ ಶುಲ್ಕಗಳನ್ನು ಗ್ರಾಹಕರು ಕಟ್ಟಲೇಬೇಕು, ನಮ್ಮಿಂದ ಏನು ಮಾಡಲು ಸಾಧ್ಯವಿಲ್ಲ ಇದು ಬ್ಯಾಂಕಿನ ಕೇಂದ್ರ ಕಚೇರಿಯಿಂದ ಬಂದ ಸೂಚನೆ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ.
ಗ್ರಾಹಕರಿಗೆ ರಿಲೀಫ್ ನೀಡಿದ ಕೆನರಾ ಬ್ಯಾಂಕ್
ಎಲ್ಲ ಕಡೆಯಿಂದಲೂ ದೂರು ಕೇಳಿಬಂದಾಗ, ಕೆನರಾ ಬ್ಯಾಂಕ್ ಎಚ್ಚೆತ್ತುಕೊಂಡಿದೆ. ತಕ್ಷಣ ಬ್ಯಾಂಕ್ ಹೇರಿರುವ ಹೊಸ ಶುಲ್ಕವನ್ನು ವಾಪಸ್ ಪಡೆದುಕೊಂಡಿದೆ.
ಇದೀಗ ವಿಲೀನ ಪ್ರಕ್ರಿಯೆ ನಡೆಯುತ್ತಿದ್ದು, ಅದು ಮುಕ್ತಾಯಗೊಂಡ ತಕ್ಷಣ, ಗ್ರಾಹಕರ ಖಾತೆಯಿಂದ ಕಡಿತಗೊಂಡಿರುವ ಹಾಗೂ ಹೆಚ್ಚುವರಿ ವಿಧಿಸಲಾದ ಶುಲ್ಕವನ್ನು ಗ್ರಾಹಕರ ಖಾತೆಗೆ ಮರುಪಾವತಿ ಮಾಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
