ಮಂಗಳೂರು: ಮಂಗಳೂರು ನಗರದ ಹೃದಯಭಾಗದಲ್ಲಿ ಹಾಡಹಗಲೇ ಕರ್ತವ್ಯನಿರತ ಪೊಲೀಸ್ ಅಧಿಕಾರಿ ಮೇಲೆ ಅಮಾನುಷ ಹಲ್ಲೆ ನಡೆದಿದೆ. ದುಷ್ಕರ್ಮಿಗಳು ಚೂರಿಯಿಂದ ಚುಚ್ಚಿ ಪರಾರಿಯಾಗಿದ್ದಾರೆ. ಈ ಘಟನೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬಂದರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ನ್ಯೂ ಚಿತ್ರಾ ಜಂಕ್ಷನ್ ಬಳಿ ನಡೆದಿದೆ.
ಅಪರಾಹ್ನ ಈ ಘಟನೆ ನಡೆದಿದ್ದು, ಗಾಯಗೊಂಡ ಪೊಲೀಸ್ ಅಧಿಕಾರಿಯನ್ನು ಬಂದರು ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೆಬಲ್ ಗಣೇಶ್ ಕಾಮತ್ ಎಂದು ಗುರುತಿಸಲಾಗಿದೆ. ಪೊಲೀಸ್ ಅಧಿಕಾರಿಯ ಕೈಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಆರೋಪಿಗಳಿಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಈ ಘಟನೆ ಯಾವ ಕಾರಣಕ್ಕೆ ನಡೆದಿದೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ಘಟನೆಗೆ ವಿವಿಧ ಸಂಘಟನೆಗಳ ಖಂಡನೆ
ಪೊಲೀಸರ ಮೇಲಿನ ಹಲ್ಲೆಯನ್ನು ವಿವಿಧ ಸಂಘಟನೆಗಳು ಖಂಡಿಸಿವೆ. ರಥಬೀದಿಯಲ್ಲಿ ಕರ್ತವ್ಯ ನಿರತರಾಗಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ನಡೆದ ದಾಳಿಯನ್ನು ಮುಸ್ಲಿಂ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ತತಕ್ಷಣ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ, ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತಹ ಕ್ರಮ ಕೈಗೊಳ್ಳಬೇಕು ಎಂದು ಅದು ಆಗ್ರಹಿಸಿದೆ.
ಈ ಘಟನೆಯಿಂದ ಸಮಾಜಕ್ಕೆ ತಪ್ಪು ಮಾಹಿತಿ ರವಾನೆಯಾಗುವ ಸಾಧ್ಯತೆ ಇದೆ ಎಂದು ಸಂಘಟನೆ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಅಶ್ರಫ್ ಹೇಳಿದ್ದಾರೆ.