ಮಂಗಳೂರು: ನಗರದ ಹೊರವಲಯದಲ್ಲಿ ಇರುವ ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಿಂದ ಸ್ಥಳೀಯರು ಮತ್ತು ಸುತ್ತಮುತ್ತಲಿನ ಪರಿಸರ ಸಂಪೂರ್ಣ ನಾಶವಾಗಿದೆ. ಈ ಮಧ್ಯೆ, ಸಂತ್ರಸ್ತರಿಗೆ ಸೂಕ್ತ ಮೂಲಭೂತ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಗೆ ಹೈಕೋರ್ಟ್ ನಿರ್ದೇಶನ ನೀಡಿತ್ತು.
ಅದರಂತೆ, ಕುಡಿಯುವ ನೀರು ಹಾಗೂ ಇತರ ಮೂಲಭೂತ ಸೌಕರ್ಯ ಕಲ್ಪಿಸಿರುವುದಾಗಿ ಮಂಗಳೂರು ಮಹಾನಗರ ಪಾಲಿಕೆ ಹೈಕೋರ್ಟ್‌ಗೆ ವರದಿ ನೀಡಿದೆ. ಈ ಬಗ್ಗೆ ಸ್ಥಳಕ್ಕೆ ಖುದ್ದು ತೆರಳಿ ಪರಿಶೀಲನೆ ಮಾಡಿ ವರದಿ ನೀಡುವಂತೆ ಹೈಕೋರ್ಟ್ ಪೀಠ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಕೇಳಿಕೊಂಡಿತ್ತು.
ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರನ್ನೊಳಗೊಂಡ ಉನ್ನತ ಮಟ್ಟದ ನಿಯೋಗ ಪಚ್ಚನಾಡಿ ಮತ್ತು ಇತರ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಕಾನೂನು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಮಾನ್ಯ ನ್ಯಾಯಾಧೀಶರಾದ ಶಿಲ್ಪಾ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎನ್. ನರಸಿಂಹ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ, ಪ್ರಾಧಿಕಾರದ ನಿಯುಕ್ತ ನ್ಯಾಯವಾದಿ ಚಂದ್ರಹಾಸ ಕೊಟ್ಟಾರಿ ನಿಯೋಗದ ನೇತೃತ್ವ ವಹಿಸಿದ್ದರು.
ಸ್ಥಳೀಯ ಪಾಲಿಕೆ ಸದಸ್ಯೆ ಸಂಗೀತಾ ನಾಯಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಿಯೋಗ ಸ್ಥಳೀಯರನ್ನು ಭೇಟಿ ಮಾಡಿ ಅವರ ಅಹವಾಲನ್ನು ಆಲಿಸಿತು. ಪಾಲಿಕೆ ಮೇಲ್ನೋಟಕ್ಕೆ ನೀರಿನ ಸೌಕರ್ಯ ಕಲ್ಪಿಸಿದ್ದರೂ ಸಮರ್ಪಕವಾಗಿ ನೀರಿನ ಪೂರೈಕೆ ಮಾಡುತ್ತಿಲ್ಲ. ಅಂತರ್ಜಲ ಸಂಪೂರ್ಣ ಕಲುಶಿತಗೊಂಡಿದ್ದು, ಕುಡಿಯಲು ಯೋಗ್ಯವಲ್ಲ ಎಂಬಿತ್ಯಾದಿ ದೂರುಗಳನ್ನು ಸ್ಥಳೀಯರು ನಿಯೋಗದ ಮುಂದೆ ನಿವೇದಿಸಿಕೊಂಡರು.














