ಕೋಡಿಹಳ್ಳಿ ಬಗ್ಗೆ ಕಮೆಂಟ್ ಮಾಡಲು "ಕಿಸ್ ಭೂಪ" ರೇಣುಕಾಚಾರ್ಯಗೆ ನೈತಿಕತೆ ಇಲ್ಲ: ರೈತ ಸಂಘ
ಬೆಂಗಳೂರು: ರೈತ ಸಂಘದ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಸಂಘಟಿತ ದಲ್ಲಾಲಿಗಳ ನಾಯಕ ಎಂದು ಜರೆದ ರೇಣುಕಾಚಾರ್ಯ ಅವರಿಗೆ ರೈತ ಸಂಘ ಮತ್ತು ಹಸಿರು ಸೇನೆ ಬಲವಾದ ತಿರುಗೇಟು ನೀಡಿದೆ.
ಅವರೊಬ್ಬ ಕಿಸ್ ಭೂಪ. ರಾಜ್ಯದ ಜನರ ಕಣ್ಣಲ್ಲಿ ನೈತಿಕತೆ ಕಳೆದುಕೊಂಡ ನಾಯಕ. ಅವರು ಕೋಡಿಹಳ್ಳಿ ಬಗ್ಗೆ ಕಮೆಂಟ್ ಮಾಡುವ ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ ಎಂದು ರೈತ ಸಂಘದ ನಾಯಕ ಶ್ರೀಧರ ಶೆಟ್ಟಿ ತಿರುಗೇಟು ನೀಡಿದ್ದಾರೆ.
ರೈತರು ತಮಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ಬೀದಿಗಿಳಿದಿದ್ದಾರೆ. ಇದನ್ನು ಸಹಿಸದ ರಾಜಕಾರಣಿಗಳು ಹೋರಾಟಗಾರರ ನೈತಿಕ ಸ್ಥೈರ್ಯ ಕುಸಿಯುವ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದು ನಿಜಕ್ಕೂ ಅವರು ಮಾಡುತ್ತಿರುವ ಜನದ್ರೋಹ ಎಂದು ರೈತ ಸಂಘ ಅಭಿಪ್ರಾಯಪಟ್ಟಿದೆ.
ರೈತರು, ಕಾರ್ಮಿಕರು ರೊಚ್ಚಿಗೆದ್ದು ಬೀದಿಗಿಳಿದಿದ್ದಾರೆ. ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ. ಜನರೂ ಈ ಹೋರಾಟವನ್ನು ಬೆಂಬಲಿಸುತ್ತಿದ್ದಾರೆ. ಆದರೆ, ಸರ್ಕಾರ ಕಣ್ಣು, ಮೂಗು ಮತ್ತು ಕಿವಿ ಮುಚ್ಚಿಕೊಂಡು ಗಾಢ ನಿದ್ರೆಯಲ್ಲಿದೆ. ಇಂತಹ ಸರ್ಕಾರ ಇದ್ದರಷ್ಟು ಹೋದರೆಷ್ಟು ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ರೈತ ಸಂಘದ ಧೀರೋಧಾತ್ತ ನಾಯಕರೂ ಜನನಾಯಕರೂ ಆಗಿರುವ ಕೋಡಿಹಳ್ಳಿ ಬಗ್ಗೆ ತುಚ್ಚವಾಗಿ ಮಾತನಾಡುವುದು ಸರಿಯಲ್ಲ. ಅದರ ಬದಲು ಗೌರವಯುತವಾಗಿ ವರ್ತಿಸಿ ಸಂಘಟಿತ ರೈತ ಕಾರ್ಮಿಕರ ಭರವಸೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಅವರು ರೇಣುಕಾಚಾರ್ಯ ಅವರಿಗೆ ಕಿವಿಮಾತು ಹೇಳಿದ್ದಾರೆ.

