ಮಂಗಳೂರು: ಜೋಗಿ, ಗೊಲ್ಲ ಸೇರಿದಂತೆ 46 ಜಾತಿ-ಜನಾಂಗದ ಸಮುದಾಯದ ಸರ್ವಾಂಗೀಣ ಏಳಿಗೆಗೆ ರಾಜ್ಯ ಅಲೆಮಾರಿ ಅಭಿವೃದ್ಧಿ ನಿಗಮ ಬದ್ಧವಾಗಿದ್ದು, ಈ ಜನರ ಏಳಿಗೆಗಾಗಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದು ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಪ್ರಕಟಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಬಿಜೆಪಿ ಕಚೇರಿಯಲ್ಲಿ ತಮ್ಮ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಧ್ಯಮಕ್ಕೆ ವಿವರ ನೀಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮತ್ತು ಅವರ ಸಲಹೆಯಂತೆ ರಾಜ್ಯದ ಅಲೆಮಾರಿ ಮತ್ತು ಅರೆ ಅಲೆಮಾರಿ ಜನರ ಶ್ರೇಯೋಭಿವೃದ್ಧಿಗೆ ದುಡಿಯುವುದಾಗಿ ತಿಳಿಸಿದರು.
ಅಲೆಮಾರಿ ಜನರಿಗೆ ರಾಜ್ಯ ಸರ್ಕಾರದಿಂದ ಮೂಲಭೂತ ಸೌಕರ್ಯದ ನೆರವು, ಸ್ವಯಂ ಉದ್ಯೋಗದ ಯೋಜನೆಗಳು, ಅರಿವು ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ ಸೇರಿದಂತೆ ಐದು ಅಂಶಗಳನ್ನು ಈ ನಿಗಮದಿಂದ ಅಳವಡಿಸಿಕೊಳ್ಳುತ್ತಿದ್ದೇನೆ ಎಂದು ರವೀಂದ್ರ ಶೆಟ್ಟಿ ತಿಳಿಸಿದರು.
Watch This Video Also:
ಅಲೆಮಾರಿ ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸುವುದು ಇದೇ ಮೊದಲಲ್ಲ. ಈ ಹಿಂದೆ, 2010ರಲ್ಲಿ ನಾನು ರೋಟರಿ ಕ್ಲಬ್ ಅಧ್ಯಕ್ಷರಾಗಿದ್ದಾಗ ಮುಡಿಪು ಮತ್ತು ಸುತ್ತಮುತ್ತ ನೆಲೆಸಿದ್ದ 24 ಕುಟುಂಬಗಳಿಗೆ ವಿವಿಧ ಯೋಜನೆಗಳನ್ನು ರೂಪಿಸಿದ್ದೆ. ಈ ಕುಟುಂಬಗಳ ಎಲ್ಲ ಮಕ್ಕಳನ್ನು ದತ್ತು ತೆಗೆದುಕೊಂಡು ಏಳು ವರ್ಷಗಳ ಕಾಲ ಉಚಿತ ಶಿಕ್ಷಣ, ಬಟ್ಟೆ ಬರೆ, ಪುಸ್ತಕ ಎಲ್ಲವನ್ನೂ ಒದಗಿದ್ದೆ. ಅಂದು ಮಾಡಿದ ಕಾರ್ಯಕ್ಕೆ ಸಂದ ಬೆಲೆಯಾಗಿ ಈ ಗೌರವ ಪ್ರಾಪ್ತಿಯಾಗಿದೆ. ಇದು ಪದವಿಯಲ್ಲ, ಬದಲಾಗಿ ಇದೊಂದು ಜನರಿಗೆ ಸೇವೆ ಮಾಡುವ ಅವಕಾಶ ಮತ್ತು ಸಿಎಂ ನೀಡಿದ ಮಹಾ ಜವಾಬ್ದಾರಿಯಾಗಿದೆ ಎಂದು ರವೀಂದ್ರ ಶೆಟ್ಟಿ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ, ವಕ್ತಾರ ರಾಧಾಕೃಷ್ಣ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಸೇರಿದಂತೆ ಬಿಜೆಪಿ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
