ಬೆಂಗಳೂರು:
ಮನೆಯ ಬಾತ್‌ರೂಂನ ಎಕ್ಸಾಸ್ಟ್ ಫ್ಯಾನ್‌ನ (Exhaust Fan) ಬ್ಲೇಡ್‌ಗಳ ಮಧ್ಯೆ ಮೊಬೈಲ್ ಫೋನ್ ಅಡಗಿಸಿಟ್ಟು, ಸ್ನಾನ ಮಾಡುತ್ತಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಯುವತಿಯ ವಿಡಿಯೋ ಚಿತ್ರೀಕರಿಸಲು ಯತ್ನಿಸಿರುವ ಆಘಾತಕಾರಿ ಘಟನೆ ಬೆಂಗಳೂರಿನ ಕೋರಮಂಗಲದ 7ನೇ ಬ್ಲಾಕ್‌ನಲ್ಲಿ ನಡೆದಿದೆ. ಸಂತ್ರಸ್ತ 29 ವರ್ಷದ ಯುವತಿ ನೀಡಿದ ದೂರಿನ ಆಧಾರದ ಮೇಲೆ ಕೋರಮಂಗಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?:
ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವತಿ ನವೆಂಬರ್ 20ರಂದು ರಾತ್ರಿ 9:40ರ ಸುಮಾರಿಗೆ ಜಿಮ್‌ನಿಂದ ಮನೆಗೆ ಮರಳಿದ್ದರು. ಬಳಿಕ ಸ್ನಾನಕ್ಕಾಗಿ ಬಾತ್‌ರೂಂನ ಗೀಸರ್ ಆನ್ ಮಾಡಿ ಸುಮಾರು 20 ನಿಮಿಷಗಳ ನಂತರ ಬಾತ್‌ರೂಂ ಪ್ರವೇಶಿಸಿದ್ದರು.
ಈ ವೇಳೆ ಶವರ್ ಕೆಳಭಾಗದಲ್ಲಿ ಸ್ವಲ್ಪ ಧೂಳು ಬಿದ್ದಿರುವುದು ಹಾಗೂ ಬಕೆಟ್‌ನೊಳಗೆ ಸ್ಕ್ರೂ ಒಂದು ಬಿದ್ದಿರುವುದನ್ನು ಯುವತಿ ಗಮನಿಸಿದ್ದರು. ಅದು ಎಲ್ಲಿಂದಲೋ ಬಿದ್ದಿರಬಹುದು ಎಂದು ಭಾವಿಸಿ ಸ್ಕ್ರೂ ಪಕ್ಕಕ್ಕಿಟ್ಟು ಬಕೆಟ್ ತೊಳೆದು ಸ್ನಾನಕ್ಕೆ ಮುಂದಾಗಿದ್ದರು.
ರಾತ್ರಿ 10:10ರ ಸುಮಾರಿಗೆ ಸ್ನಾನ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಮೇಲ್ಭಾಗದಲ್ಲಿದ್ದ ಎಕ್ಸಾಸ್ಟ್ ಫ್ಯಾನ್ ಕಡೆಗೆ ಕಣ್ಣು ಹಾಯಿಸಿದಾಗ, ಫ್ಯಾನ್‌ನ ಬ್ಲೇಡ್‌ಗಳ ಮಧ್ಯೆ ಮೊಬೈಲ್ ಫೋನ್ ಇರುವುದನ್ನು ಕಂಡು ಯುವತಿ ಬೆಚ್ಚಿಬಿದ್ದಿದ್ದಾರೆ. ಕಪ್ಪು ಬಣ್ಣದ ಮೊಬೈಲ್‌ಗೆ ತಿಳಿ ಹಳದಿ ಬಣ್ಣದ ಕವರ್ ಇದ್ದು, ಯುವತಿ ಗಾಬರಿಯಿಂದ ಜೋರಾಗಿ ಕಿರುಚುತ್ತಿದ್ದಂತೆ ಆ ಮೊಬೈಲ್ ಅನ್ನು ಯಾರೋ ಹಿಂದಕ್ಕೆ ಎಳೆದುಕೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ತನಿಖೆ ಚುರುಕುಗೊಳಿಸಿದ ಪೊಲೀಸರು:
ತಕ್ಷಣವೇ ಬಟ್ಟೆ ಧರಿಸಿಕೊಂಡು ಕೂಗುತ್ತಾ ಮನೆಯ ಟೆರೇಸ್‌ಗೆ ತೆರಳಿ ಯುವತಿ ಪರಿಶೀಲಿಸಿದರಾದರೂ ಅಲ್ಲಿ ಯಾರೂ ಕಂಡುಬಂದಿಲ್ಲ. ಯುವತಿ ವಾಸವಿರುವ ಕಟ್ಟಡದ ನೆಲಮಹಡಿಯಲ್ಲಿ ಮನೆ ಮಾಲೀಕರು ನೆಲೆಸಿದ್ದು, ಮೊದಲ ಮಹಡಿಯಲ್ಲಿ ಯುವತಿ ಒಬ್ಬರೇ ವಾಸವಾಗಿದ್ದಾರೆ. ಅಲ್ಲದೆ, ಮನೆಯ ಅಕ್ಕಪಕ್ಕದಲ್ಲಿ ಒಂದೆರಡು ಶೆಡ್‌ಗಳೂ ಇವೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಕೋರಮಂಗಲ ಪೊಲೀಸರು, ಬಾತ್‌ರೂಂಗೆ ಹೊರಗಿನಿಂದ ನೇರವಾಗಿ ಪ್ರವೇಶಿಸಲು ಯಾವುದೇ ದಾರಿ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಎಕ್ಸಾಸ್ಟ್ ಫ್ಯಾನ್ ಬಳಿ ಮೊಬೈಲ್ ಇರಿಸಿದ ಕಿಡಿಗೇಡಿ ಯಾರು ಎಂಬುದರ ಕುರಿತು ಇನ್ನೂ ನಿಖರ ಸುಳಿವು ಲಭ್ಯವಾಗಿಲ್ಲ. ಸುತ್ತಮುತ್ತಲಿನ ನಿವಾಸಿಗಳು ಹಾಗೂ ಶೆಡ್‌ಗಳಲ್ಲಿರುವವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.