ಬೆಲೊ ಹಾರಿಜಾಂಟೆ (ಬ್ರೆಜಿಲ್):
ಸಾಮಾಜಿಕ ಜಾಲತಾಣಗಳಲ್ಲಿ ಕಂಡ ಕನಸಿನ ಸುಂದರಿಯನ್ನೇ ಮದುವೆಯಾಗಲು ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಮಾರಿ, ಬರೋಬ್ಬರಿ 1,200 ಮೈಲಿ (ಸುಮಾರು 1,900 ಕಿ.ಮೀ) ದೂರ ಪ್ರಯಾಣಿಸಿದ 49 ವರ್ಷದ ವ್ಯಕ್ತಿಯೊಬ್ಬನಿಗೆ ಕೊನೆಗೆ ಆಕೆ ಬದುಕಿರುವ ಮಹಿಳೆಯೇ ಅಲ್ಲ, ಬದಲಿಗೆ ಕೃತಕ ಬುದ್ಧಿಮತ್ತೆ (AI) ಸೃಷ್ಟಿಸಿದ ಒಂದು ಕಾಲ್ಪನಿಕ ಪಾತ್ರ ಎಂಬ ಕಹಿ ಸತ್ಯ ತಿಳಿದು ಕಂಗಾಲಾದ ವಿಚಿತ್ರ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ.
ಬ್ರೆಜಿಲ್‌ನ ಮಾರನ್‌ಹಾವೊ ಮೂಲದ ಕಟ್ಟಡ ಕಾರ್ಮಿಕ (ಮೇಸ್ತ್ರಿ) ಎಡಿಮಾರ್ ಮಾರ್ಟಿನ್ಸ್ (49) ಈ ಆನ್‌ಲೈನ್ ಮೋಹಕ್ಕೆ ಬಿದ್ದು ಮೋಸಹೋದ ದುರ್ದೈವಿ.
ಏನಿದು ಘಟನೆ?:
ತಾಯಿಯ ನಿಧನದ ನಂತರ ಒಂಟಿತನದಿಂದ ಬಳಲುತ್ತಿದ್ದ ಮಾರ್ಟಿನ್ಸ್‌ಗೆ, 2020ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ‘ಜೆಸ್ಸಿಕಾ ಒಲಿವೇರಾ’ (ಜೆಸ್ಸಿಕಾ ಫಜೆಂಡೀರಾ) ಎಂಬ ಪ್ರೊಫೈಲ್ ಕಣ್ಣಿಗೆ ಬಿದ್ದಿತ್ತು. 3 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದ ಆ ಖಾತೆಯಲ್ಲಿ, ಹೊಂಬಣ್ಣದ ಕೂದಲಿನ ಆಕರ್ಷಕ ಮಹಿಳೆಯೊಬ್ಬಳು ಸುಂದರವಾದ ತೋಟದಲ್ಲಿ (ಫಾರ್ಮ್‌ಹೌಸ್) ವಾಸಿಸುತ್ತಿರುವ ವಿಡಿಯೋಗಳಿದ್ದವು. ಆಕೆ "ತನ್ನೊಂದಿಗೆ ಬಂದು ನೆಲೆಸುವ ಪುರುಷನಿಗೆ ವಸತಿ ಮತ್ತು ಸಂಪೂರ್ಣ ಆರ್ಥಿಕ ಭದ್ರತೆ ನೀಡುತ್ತೇನೆ, ಅವರು ಕೆಲಸವನ್ನೇ ಮಾಡಬೇಕಿಲ್ಲ" ಎಂದು ಆಹ್ವಾನ ನೀಡುತ್ತಿದ್ದಳು.
ಆ ಪ್ರೊಫೈಲ್‌ನೊಂದಿಗೆ ಆನ್‌ಲೈನ್‌ನಲ್ಲಿ ಚಾಟ್ ಮಾಡುತ್ತಾ ಪ್ರೀತಿಯಲ್ಲಿ ಬಿದ್ದ ಮಾರ್ಟಿನ್ಸ್, ಹೊಸ ಬದುಕು ಆರಂಭಿಸುವ ಕನಸು ಹೊತ್ತು ಆಕೆಯನ್ನು ಖುದ್ದಾಗಿ ಭೇಟಿಯಾಗಲು ನಿರ್ಧರಿಸಿದ.
ಮನೆಯ ಸಾಮಗ್ರಿ ಮಾರಿ 1,200 ಮೈಲಿ ಬಸ್ ಪ್ರಯಾಣ:
ಪ್ರಯಾಣದ ಖರ್ಚಿಗಾಗಿ ಅಕ್ಟೋಬರ್ 9ರಂದು ತನ್ನ ಮನೆಯಲ್ಲಿದ್ದ ಸಾಮಗ್ರಿಗಳನ್ನೆಲ್ಲಾ ಮಾರಾಟ ಮಾಡಿದ ಮಾರ್ಟಿನ್ಸ್, ಬಸ್ ಹತ್ತಿ ಸತತ ಒಂದು ದಿನಕ್ಕೂ ಹೆಚ್ಚು ಕಾಲ 1,200 ಮೈಲಿ ಪ್ರಯಾಣಿಸಿ ಅಕ್ಟೋಬರ್ 11ರಂದು ಬೆಲೊ ಹಾರಿಜಾಂಟೆ ನಗರಕ್ಕೆ ಬಂದು ತಲುಪಿದ. ಆಕೆಯ ಫೋಟೋ ಹಿಡಿದುಕೊಂಡು ರಸ್ತೆ ರಸ್ತೆಯಲ್ಲಿ ಸಾರ್ವಜನಿಕರಿಗೆ ತೋರಿಸಿ ಹುಡುಕಾಡಿದರೂ ಆಕೆ ಪತ್ತೆಯಾಗಲೇ ಇಲ್ಲ.
ಕೊನೆಗೆ ಬಯಲಾದ AI ರಹಸ್ಯ:
ತನಿಖೆ ಮತ್ತು ವಿಚಾರಣೆ ನಡೆಸಿದಾಗ, ಆ ಸಾಮಾಜಿಕ ಮಾಧ್ಯಮ ಖಾತೆಯನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯು, ‘ಜೆಸ್ಸಿಕಾ’ ಎಂಬಾಕೆ ಕೇವಲ ವಾಣಿಜ್ಯ ಲಾಭಕ್ಕಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ಒಂದು ಕಾಲ್ಪನಿಕ ಪಾತ್ರ ಎಂಬುದನ್ನು ಒಪ್ಪಿಕೊಂಡಿದ್ದಾನೆ. ತಾನು ಮಾರ್ಟಿನ್ಸ್ ಜತೆ ಯಾವುದೇ ವೈಯಕ್ತಿಕ ಸಂಭಾಷಣೆ ನಡೆಸಿಲ್ಲ ಎಂದೂ ಆತ ಸ್ಪಷ್ಟಪಡಿಸಿದ್ದಾನೆ.
ಕೈಯಲ್ಲಿದ್ದ ಹಣವೆಲ್ಲವೂ ತೀರಿ ಕಂಗಾಲಾಗಿ ಕುಳಿತಿದ್ದ ಮಾರ್ಟಿನ್ಸ್‌ನನ್ನು ಗಮನಿಸಿದ ಸ್ಥಳೀಯ ಪಾಲಿಕೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ, ಆತನಿಗೆ ಊಟೋಪಚಾರ ನೀಡಿ, ಆಶ್ರಯ ಕಲ್ಪಿಸಿ, ಆತ ತನ್ನ ಊರಿಗೆ ವಾಪಸ್ ತೆರಳಲು ಬಸ್ ಟಿಕೆಟ್ ಮಾಡಿಸಿಕೊಟ್ಟು ಕಳುಹಿಸಿದ್ದಾರೆ.
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ದುರುಪಯೋಗ ಮತ್ತು ಅತಿರೇಕದ ಭ್ರಮೆಗಳು ಜನಸಾಮಾನ್ಯರ ಮೇಲೆ ಎಂತಹ ಪರಿಣಾಮ ಬೀರಬಲ್ಲವು ಎಂಬುದಕ್ಕೆ ಈ ಘಟನೆ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
