ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ರಾಮಸೇನೆ ಹಾಗೂ ಶ್ರೀರಾಮ ಸೇನೆ ವಿಲೀನ: ರಾಜ್ಯಾದ್ಯಂತ ಜಂಟಿ ಕಾರ್ಯಾಚರಣೆಗೆ ಪ್ರಮೋದ್ ಮುತಾಲಿಕ್-ಪ್ರಸಾದ್ ಅತ್ತಾವರ್ ತೀರ್ಮಾನ


ಮಂಗಳೂರು: ರಾಜ್ಯದಲ್ಲಿ ಹಿಂದೂತ್ವದ ವಿಚಾರಗಳು, ಗೋಹತ್ಯೆ ತಡೆ ಹಾಗೂ ಲವ್ ಜಿಹಾದ್ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ರಾಮಸೇನೆ ಮತ್ತು ಶ್ರೀರಾಮ ಸೇನೆ ಸಂಘಟನೆಗಳು ಒಗ್ಗೂಡಿದ್ದು, ಇನ್ನು ಮುಂದೆ 'ಶ್ರೀರಾಮ ಸೇನೆ' ಎಂಬ ಒಂದೇ ಹೆಸರಿನಡಿ ರಾಜ್ಯಾದ್ಯಂತ ಜಂಟಿಯಾಗಿ ಕಾರ್ಯನಿರ್ವಹಿಸಲು  ನಿರ್ಧಾರ ಕೈಗೊಂಡಿವೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ತಿಳಿಸಿದ್ದಾರೆ.

 ಮಂಗಳೂರಿನಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಮಹತ್ವದ ಬೆಳವಣಿಗೆಯನ್ನು ಅಧಿಕೃತವಾಗಿ ಪ್ರಕಟಿಸಿದರು.

ಪ್ರಸಾದ್ ಅತ್ತಾವರ್ ಭೇಟಿ – ಸಂಘಟನಾ ಬಲವರ್ಧನೆಗೆ ಒಮ್ಮತ:
ಮಂಗಳೂರಿನಲ್ಲಿ ಇತ್ತೀಚೆಗೆ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ರಾಮಸೇನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರ್ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಪ್ರಮೋದ್ ಮುತಾಲಿಕ್,  ಸಂಘಟನಾತ್ಮಕ ಚರ್ಚೆ ನಡೆಸಿದರು.

ಪ್ರಸ್ತುತ ರಾಜ್ಯದಲ್ಲಿ ಹಿಂದೂ ಸಮಾಜ ಮತ್ತು ಕಾರ್ಯಕರ್ತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದುತ್ವಪರ ಶಕ್ತಿಗಳು ಪ್ರತ್ಯೇಕವಾಗಿ ಉಳಿಯದೆ ಒಂದಾಗಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಮಸೇನೆ ಹಾಗೂ ಶ್ರೀರಾಮ ಸೇನೆ ಇನ್ನು ಮುಂದೆ ಒಂದೇ ವೇದಿಕೆಯಡಿ ಒಗ್ಗಟ್ಟಾಗಿ ಕೆಲಸ ಮಾಡಲಿವೆ. ಪ್ರಸಾದ್ ಅತ್ತಾವರ್ ಅವರ ಅಪಾರ ಅನುಭವ ಮತ್ತು ಸಂಘಟನಾ ಶಕ್ತಿಯೊಂದಿಗೆ ಅವರ ಆರೋಗ್ಯ ಸಂಪೂರ್ಣ ಸುಧಾರಿಸಿದ ಬಳಿಕ ರಾಜ್ಯಾದ್ಯಂತ ಜಂಟಿ ಪ್ರವಾಸ ಕೈಗೊಂಡು ಸಂಘಟನೆಯನ್ನು ಬಲಪಡಿಸಲಾಗುವುದು. ಈ ವಿಲೀನ ಪ್ರಕ್ರಿಯೆಗೆ ರಾಮಸೇನೆಯ ಎಲ್ಲ ಪದಾಧಿಕಾರಿಗಳ ಒಪ್ಪಿಗೆಯೂ ಇದೆ" ಎಂದು ಮುತಾಲಿಕ್ ಸ್ಪಷ್ಟಪಡಿಸಿದರು.

ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳಲ್ಲಿ ದಸರಾ ರಜೆ ಕಡಿತಕ್ಕೆ ಹೋರಾಟದ ಎಚ್ಚರಿಕೆ

ಇದೇ ವೇಳೆ ಶಾಲಾ ರಜೆ ವಿಚಾರದಲ್ಲಿ ಕಾನ್ವೆಂಟ್ ಶಾಲೆಗಳ ಧೋರಣೆಯನ್ನು ತೀವ್ರವಾಗಿ ಖಂಡಿಸಿದ ಅವರು, ಸರ್ಕಾರ ಘೋಷಿಸಿದ ಅಧಿಕೃತ ದಸರಾ ರಜೆಯನ್ನು ಎಲ್ಲ ಶಿಕ್ಷಣ ಸಂಸ್ಥೆಗಳೂ ಕಡ್ಡಾಯವಾಗಿ ಪಾಲಿಸಬೇಕೆಂದು ಎಚ್ಚರಿಸಿದರು.
ರಾಜ್ಯ ಸರ್ಕಾರವು ಅಕ್ಟೋಬರ್ 3 ರಿಂದ 21 ರವರೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಸುಮಾರು 20 ದಿನಗಳ ಅಧಿಕೃತ ದಸರಾ ರಜೆ ಘೋಷಿಸಿದೆ. ಆದರೆ ಹಲವು ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳು ದಸರಾ ರಜೆಯನ್ನು ಕಡಿತಗೊಳಿಸಿ, ಪರೀಕ್ಷೆಗಳನ್ನು ನಡೆಸುವ ಮೂಲಕ ರಜೆಯನ್ನು ಡಿಸೆಂಬರ್ ತಿಂಗಳ ಕ್ರಿಸ್‌ಮಸ್ ಹಬ್ಬಕ್ಕೆ 10 ದಿನಗಳ ಕಾಲ ಶಿಫ್ಟ್ ಮಾಡಿಕೊಳ್ಳುತ್ತಿವೆ ಎಂದು ಆಪಾದಿಸಿದರು.

"ಈ ಶಾಲೆಗಳಲ್ಲಿ ಶೇ. 99 ರಷ್ಟು ಹಿಂದೂ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೇ ಇದ್ದಾರೆ. ದಸರಾ ನಮ್ಮ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಹಬ್ಬವಾಗಿದ್ದು, ಮಕ್ಕಳ ಪರೀಕ್ಷೆ ನೆಪದಲ್ಲಿ ಹಬ್ಬದ ಸಂಭ್ರಮ ಕಸಿಯುವುದು ಅಕ್ಷಮ್ಯ. ಕಾನ್ವೆಂಟ್ ಶಾಲೆಗಳು ದಸರಾ ರಜೆಯನ್ನು ನೀಡದಿದ್ದಲ್ಲಿ, ರಾಜ್ಯಾದ್ಯಂತ ಆಯಾ ಶಾಲೆಗಳ ಮುಂಭಾಗದಲ್ಲೇ ಧರಣಿ ನಡೆಸಿ ತೀವ್ರ ಪ್ರತಿಭಟನೆ ನಡೆಸಲಾಗುವುದು" ಎಂದು ಎಚ್ಚರಿಕೆ ನೀಡಿದರು. ಈ ಸಂಬಂಧ ಶಿಕ್ಷಣ ಸಚಿವರು, ಡಿಡಿಪಿಐ ಹಾಗೂ ಬಿಇಒಗಳಿಗೂ ಮನವಿ ಸಲ್ಲಿಸಲಾಗುವುದು ಎಂದರು.

ತುಳು 2ನೇ ಅಧಿಕೃತ ಭಾಷೆ ಘೋಷಣೆಗೆ ಸ್ವಾಗತ:
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರಿನಲ್ಲಿ ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿ ಸಚಿವ ಸಂಪುಟದಲ್ಲಿ ಘೋಷಣೆ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದ ಮುತಾಲಿಕ್, ಇದು ತುಳುನಾಡಿನ ಸಮಸ್ತ ಜನರ ಬಹುದಿನಗಳ ಕನಸಾಗಿತ್ತು ಎಂದರು.
 ಕೇವಲ ಘೋಷಣೆಗೆ ಸೀಮಿತವಾಗದೆ, ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರ್ಪಡೆಗೊಳಿಸಲು ರಾಜ್ಯದ ಎಲ್ಲಾ ಸಂಸದರು ಕೇಂದ್ರ ಸರ್ಕಾರದ ಮೇಲೆ ತಕ್ಷಣವೇ ಒತ್ತಡ ಹೇರಬೇಕೆಂದು ಆಗ್ರಹಿಸಿದರು.

ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಗೂಂಡಾ ಕಾಯ್ದೆ ಆರೋಪ

ಕಾಂಗ್ರೆಸ್ ಸರ್ಕಾರವು ವ್ಯವಸ್ಥಿತವಾಗಿ ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕುವ ಉದ್ದೇಶದಿಂದ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಆರೋಪಿಸಿದರು. ನ್ಯಾಯಾಲಯದಲ್ಲಿ ಆರೋಪ ಸಾಬೀತಾಗುವ ಮುನ್ನವೇ ಏಕಾಏಕಿ ಗೂಂಡಾ ಕಾಯ್ದೆ, ಕೊಕಾ ಹೇರುವುದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ ಎಂದು ಆಕ್ರೋಶ ಹೊರಹಾಕಿದರು.