ಬೆಂಗಳೂರು:
ರಾಜ್ಯದ ರಾಜಧಾನಿ ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ಕೆ.ಆರ್. ಪುರಂನ ತ್ರಿವಳಿ ಕೊಲೆ ಪ್ರಕರಣ ನಡೆದು ಸರಿಯಾಗಿ ಮೂರು ತಿಂಗಳ ನಂತರ, ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ನ್ಯಾಯಾಲಯಕ್ಕೆ ಬರೋಬ್ಬರಿ 2,085 ಪುಟಗಳ ಪ್ರಾಥಮಿಕ ದೋಷಾರೋಪಣಾ ಪಟ್ಟಿಯನ್ನು (Chargesheet) ಮಂಗಳವಾರ ಸಲ್ಲಿಸಿದ್ದಾರೆ.
ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಮಗಳು ಹಾಗೂ ಆಕೆಯ ಲಿವ್-ಇನ್ ಸಂಗಾತಿ ಸೇರಿ ಹೆತ್ತ ಪೋಷಕರು ಹಾಗೂ ಸ್ವಂತ ಸಹೋದರಿಯನ್ನೇ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆಗೈದಿದ್ದ ಕೃತ್ಯ ಇದಾಗಿತ್ತು.
110 ಸಾಕ್ಷಿಗಳು, ವಿಧಿವಿಜ್ಞಾನ ವರದಿಗಳು ಸೇರ್ಪಡೆ:
ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಈ ಬೃಹತ್ ದೋಷಾರೋಪಣಾ ಪಟ್ಟಿಯಲ್ಲಿ 110 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ಇದರೊಂದಿಗೆ ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಗಳು ಹಾಗೂ ಆಸ್ಪತ್ರೆಗಳ ವೈದ್ಯಕೀಯ ವರದಿಗಳನ್ನು ಪ್ರಮುಖ ಸಾಕ್ಷ್ಯಗಳನ್ನಾಗಿ ಲಗತ್ತಿಸಲಾಗಿದೆ.
ಕಳೆದ ಜೂನ್ 22ರ ರಾತ್ರಿ ಸೀಗೆಹಳ್ಳಿಯ 'ಸಾಯಿ ಗ್ರೀನ್ ಅಪಾರ್ಟ್‌ಮೆಂಟ್'ನಲ್ಲಿರುವ ಫ್ಲ್ಯಾಟ್‌ನಲ್ಲಿ ಶ್ವೇತಾ ಅವರ ತಂದೆ ಸೋಮಸುಂದರ್ (55), ತಾಯಿ ಮುತ್ತುಲಕ್ಷ್ಮಿ (50) ಹಾಗೂ ತಂಗಿ ಸುಪ್ರಿಯಾ (20) ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಆರೋಪಿಗಳಾದ ಟೆಕ್ಕಿ ಶ್ವೇತಾ ಎಸ್. ಮತ್ತು ಆಕೆಯ ಲಿವ್-ಇನ್ ಪಾರ್ಟ್ನರ್ ಕೆನ್ನೆತ್‌ನನ್ನು ಪೊಲೀಸರು ಬಂಧಿಸಿದ್ದರು.
ಇನ್ನಷ್ಟು ಸಿಸಿಟಿವಿ, ಎಫ್‌ಎಸ್‌ಎಲ್ ವರದಿ ಬಾಕಿ:
ಘಟನಾ ಸ್ಥಳ ಹಾಗೂ ಅಪಾರ್ಟ್‌ಮೆಂಟ್ ಆವರಣದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾಣಿಸಿಕೊಂಡ ವ್ಯಕ್ತಿಗಳು ಶ್ವೇತಾ ಮತ್ತು ಕೆನ್ನೆತ್ ಎಂಬುದನ್ನು ದೃಢೀಕರಿಸುವ ಮುಖ ಗುರುತಿಸುವಿಕೆಯ ತಾಂತ್ರಿಕ ವರದಿ ಸೇರಿದಂತೆ ಇನ್ನು ಮೂರು ಪ್ರಮುಖ ವರದಿಗಳು ಬರಬೇಕಿದೆ. ಆ ವರದಿಗಳು ಕೈಸೇರಿದ ನಂತರ ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
