ಹೈದರಾಬಾದ್:
ಕಾಲೇಜು ರಜೆಗೆಂದು ಊರಿಗೆ ಬಂದಿದ್ದ 18 ವರ್ಷದ ಪ್ರಥಮ ವರ್ಷದ ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಮನೆಯ ಹಿಂಭಾಗದಲ್ಲಿ ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ತೆಲಂಗಾಣದ ಭದ್ರಾದ್ರಿ ಕೊತ್ತಗುಡೆಂ ಜಿಲ್ಲೆಯ ಜುಲುರುಪಾಡು ಮಂಡಲದ ವೆಂಗಣ್ಣಪಾಲೆಂ ಗ್ರಾಮದಲ್ಲಿ ನಡೆದಿದೆ. ಮೃತ ಯುವತಿಯ ಮೈಮೇಲೆ ಗಾಯದ ಗುರುತುಗಳು ಕಂಡುಬಂದಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಖಮ್ಮಂನ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಬಿಎಸ್‌ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಹರಿಣಿ (18) ಮೃತ ದುರ್ದೈವಿ.
ಘಟನೆಯ ವಿವರ:
ಕಾಲೇಜಿಗೆ ರಜೆ ಇದ್ದ ಕಾರಣ ಹರಿಣಿ ಎರಡು ದಿನಗಳ ಹಿಂದಷ್ಟೇ ತನ್ನ ಸ್ವಗ್ರಾಮ ವೆಂಗಣ್ಣಪಾಲೆಂಗೆ ಬಂದಿದ್ದರು. ತಾಯಿ ರಾಜೇಶ್ವರಿ ಅವರು ಸಂಬಂಧಿಕರ ಮನೆಗೆ ತೆರಳಿದ್ದರಿಂದ ಹರಿಣಿ ಮನೆಯಲ್ಲಿ ಒಬ್ಬರೇ ಇದ್ದರು.
ಮಂಗಳವಾರ ತಡರಾತ್ರಿ ತಾಯಿ ರಾಜೇಶ್ವರಿ ಮನೆಗೆ ಹಿಂದಿರುಗಿದಾಗ ಮಗಳು ಕಾಣೆಯಾಗಿದ್ದರು. ಗಾಬರಿಗೊಂಡ ತಾಯಿ ಗ್ರಾಮಸ್ಥರ ನೆರವಿನೊಂದಿಗೆ ಹುಡುಕಾಟ ನಡೆಸಿದಾಗ, ಮನೆಯ ಬಾತ್‌ರೂಂ ಹಿಂಭಾಗದಲ್ಲಿ ಹರಿಣಿಯ ಮೃತದೇಹ ಪತ್ತೆಯಾಗಿದೆ. ಮೃತದೇಹದ ಮೇಲೆ ಹಲವು ಗಾಯದ ಗುರುತುಗಳು ಪತ್ತೆಯಾಗಿದ್ದು, ಆಕೆಯ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿವೆ.
ಪಕ್ಕದ ಮನೆಯ ವ್ಯಕ್ತಿಯ ಮೇಲೆ ಅನುಮಾನ:
ಕೆಲವು ವರ್ಷಗಳ ಹಿಂದಷ್ಟೇ ಪತಿಯನ್ನು ಕಳೆದುಕೊಂಡಿದ್ದ ರಾಜೇಶ್ವರಿ, ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸಿಸುತ್ತಿದ್ದರು. ಮೃತ ಹರಿಣಿ ಅವರ ಹಿರಿಯ ಮಗಳು. ಪಕ್ಕದ ಮನೆಯ ವ್ಯಕ್ತಿಯೊಬ್ಬನ ಮೇಲೆ ತಾಯಿ ರಾಜೇಶ್ವರಿ ನೇರ ಸಂಶಯ ವ್ಯಕ್ತಪಡಿಸಿದ್ದು, ಮಗಳ ಸಾವಿನ ಹಿಂದೆ ಆತನ ಕೈವಾಡವಿರುವ ಬಗ್ಗೆ ಕೂಲಂಕಷ ತನಿಖೆ ನಡೆಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಜುಲುರುಪಾಡು ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.
