ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಸರ್ಕಾರದ ವಶದಿಂದ ದೇವಾಲಯಗಳ ಮುಕ್ತಿಗೆ ಬೃಹತ್ ಆಂದೋಲನ: ವಿಶ್ವ ಹಿಂದೂ ಪರಿಷತ್ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಘೋಷಣೆ!




ದೇವಾಲಯಗಳ ಆದಾಯ ಹಿಂದೂ ಸಮಾಜಕ್ಕೇ ಸಿಗಬೇಕು; ದೇಶಾದ್ಯಂತ ಸಿಎಂ, ರಾಜ್ಯಪಾಲರ ಭೇಟಿ; 2026ರಲ್ಲಿ ಹೋರಾಟ ತೀವ್ರಗೊಳಿಸಲು ವಿಎಚ್‌ಪಿ ನಿರ್ಧಾರ!

ಮಂಗಳೂರು:

ದೇಶದ ವಿವಿಧ ರಾಜ್ಯ ಸರ್ಕಾರಗಳ ಮುಷ್ಟಿಯಲ್ಲಿರುವ ಹಿಂದೂ ದೇವಾಲಯಗಳನ್ನು ಸರ್ಕಾರದ ಹಸ್ತಕ್ಷೇಪದಿಂದ ಮುಕ್ತಿಗೊಳಿಸಿ, ಭಕ್ತರಿಗೆ ಹಾಗೂ ಹಿಂದೂ ಸಮಾಜಕ್ಕೆ ಮರಳಿ ವಹಿಸಿಕೊಡಲು ಬೃಹತ್ ರಾಷ್ಟ್ರವ್ಯಾಪಿ ಆಂದೋಲನವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ (VHP) ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಘೋಷಿಸಿದ್ದಾರೆ.

ದಕ್ಷಿಣ ಕನ್ನಡ ಪ್ರವಾಸದಲ್ಲಿರುವ ಅವರು ಮಂಗಳೂರಿನ ಕದ್ರಿಯಲ್ಲಿರುವ ವಿಎಚ್‌ಪಿ ಪ್ರಾಂತ್ಯ ಕಾರ್ಯಾಲಯ 'ವಿಶ್ವಶ್ರೀ'ಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ದೇವಾಲಯಗಳಿಂದ ₹1,000 ಕೋಟಿಗೂ ಹೆಚ್ಚು ಆದಾಯ – ಮಸೀದಿ, ಚರ್ಚ್‌ ನಡೆಸದ ಸರ್ಕಾರಕ್ಕೆ ದೇವಸ್ಥಾನ ಏಕೆ ಬೇಕು?

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ಕ್ಷೇತ್ರಗಳಿಗೆ ಭೇಟಿ ನೀಡಿದ್ದನ್ನು ಸ್ಮರಿಸಿದ ಅಲೋಕ್ ಕುಮಾರ್, "ನಾನು ಸುಬ್ರಹ್ಮಣ್ಯ ದೇವಾಲಯಕ್ಕೆ ಹೋದಾಗ, ಅಲ್ಲಿನ ಎಲ್ಲಾ ದೇವಾಲಯಗಳ ಪೈಕಿ ಈ ದೇವಾಲಯದಿಂದಲೇ ಕರ್ನಾಟಕ ಸರ್ಕಾರಕ್ಕೆ ಅತ್ಯಂತ ಹೆಚ್ಚಿನ ಹಣ ಹರಿದುಹೋಗುತ್ತದೆ ಎಂದು ತಿಳಿಯಿತು. ನಮ್ಮ ಅಂದಾಜಿನ ಪ್ರಕಾರ, ದೇಶಾದ್ಯಂತ ಸರ್ಕಾರಗಳು ವಶಪಡಿಸಿಕೊಂಡಿರುವ ದೇವಾಲಯಗಳನ್ನು ಹಿಂದೂ ಸಮಾಜಕ್ಕೆ ಮರಳಿಸಿದರೆ, ಕನಿಷ್ಠ ₹1,000 ಕೋಟಿ ರೂಪಾಯಿಗಳಿಗೂ ಅಧಿಕ ಹಣ ದೇವಾಲಯಗಳ ಮುಕ್ತಿಯ ಮೂಲಕ ಹಿಂದೂ ಸಮಾಜದ ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಗಳಿಗೆ ಲಭ್ಯವಾಗಲಿದೆ," ಎಂದರು.

"ಸರ್ಕಾರಗಳು ಮಸೀದಿ, ಚರ್ಚ್, ಗುರುದ್ವಾರ, ಜೈನ ಆಶ್ರಮ ಅಥವಾ ಬೌದ್ಧ ಮಠಗಳ ಆಡಳಿತವನ್ನು ನಡೆಸುವುದಿಲ್ಲ. ಹಾಗಿರುವಾಗ ಹಿಂದೂ ದೇವಾಲಯಗಳನ್ನು ಮಾತ್ರ ಏಕೆ ತಮ್ಮ ವಶದಲ್ಲಿಟ್ಟುಕೊಳ್ಳಬೇಕು? ದೇವಸ್ಥಾನದ ಹಣವನ್ನು ಸರ್ಕಾರದ ಖಜಾನೆಗೆ ಜಮೆ ಮಾಡುವುದು, ಆಡಿಟ್ ಫೀ ಹೆಸರಿನಲ್ಲಿ ಹಣ ವಸೂಲಿ ಮಾಡುವುದು ಹಾಗೂ ಅಧಿಕಾರಿಗಳನ್ನು (ಸಿಇಒ) ಕೂರಿಸಿ ಅವರ ಸಂಬಳವನ್ನು ಭಕ್ತರ ಕಾಣಿಕೆಯಿಂದ ಭರಿಸುವುದು ತಪ್ಪು. ರಾಮಜನ್ಮಭೂಮಿ ಹೋರಾಟದಲ್ಲಿ, ರಾಮಸೇತು ರಕ್ಷಣೆಯಲ್ಲಿ, ಏಕರೂಪ ನಾಗರಿಕ ಸಂಹಿತೆ (UCC) ಜಾರಿಯಲ್ಲಿ ಹಾಗೂ ಗೋರಕ್ಷಣೆ ಕಾಯ್ದೆ ತರುವಲ್ಲಿ ನಾವು ಹೇಗೆ ಯಶಸ್ಸು ಕಂಡೆವೋ, ಹಾಗೆಯೇ ದೇವಾಲಯಗಳ ಮುಕ್ತಿ ಆಂದೋಲನದಲ್ಲೂ ಯಶಸ್ಸು ಸಾಧಿಸಿ, ಸರ್ಕಾರಗಳು ದೇವಾಲಯಗಳನ್ನು ಭಕ್ತರಿಗೆ ಹಸ್ತಾಂತರಿಸುವಂತೆ ಮಾಡುತ್ತೇವೆ," ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

2026ರ ಹೋರಾಟದ ಕಾರ್ಯತಂತ್ರ:

ದೇವಾಲಯಗಳ ಮುಕ್ತಿ ಆಂದೋಲನವನ್ನು ತೀವ್ರಗೊಳಿಸಲು 2026ರಲ್ಲಿ ಬೃಹತ್ ಯೋಜನೆ ರೂಪಿಸಲಾಗಿದೆ. ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ಸಂಸದರು ಹಾಗೂ ಶಾಸಕರನ್ನು ಖುದ್ದಾಗಿ ಭೇಟಿಯಾಗಿ ಮನವಿ ಸಲ್ಲಿಸಲಾಗುವುದು. ಬೃಹತ್ ಮಹಾನಗರಗಳಲ್ಲಿ ಹಿರಿಯ ನಾಗರಿಕರು ಹಾಗೂ ಗಣ್ಯರನ್ನು ಒಳಗೊಂಡ ಸಮಾವೇಶಗಳನ್ನು ನಡೆಸಿ, ಸಾರ್ವಜನಿಕ ಬೆಂಬಲ ಕ್ರೋಡೀಕರಿಸಲಾಗುವುದು ಎಂದು ತಿಳಿಸಿದರು.