ಮಂಗಳೂರು (ಉಳ್ಳಾಲ): ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯದ ಅಮಲಿನಲ್ಲಿ ತಲವಾರ್ ಝಳಪಿಸಿ ಸಾರ್ವಜನಿಕರಿಗೆ ಜೀವಬೆದರಿಕೆ ಒಡ್ಡಿ, ಭೀತಿ ವಾತಾವರಣ ಸೃಷ್ಟಿಸಿದ್ದ ರೌಡಿ ಶೀಟರ್ ಹಾಗೂ ಆತನ ಸಹಚರನನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಮರಗತ್ತಲೆ ನಿವಾಸಿ, ವೆಲ್ಡಿಂಗ್ ವೃತ್ತಿ ಮಾಡುತ್ತಿರುವ ರೌಡಿ ಶೀಟರ್ ಮಹಮ್ಮದ್ ಶಾಕಿರ್ (31) ಹಾಗೂ ಆತನಿಗೆ ಸಾಥ್ ನೀಡಿದ ಉಳ್ಳಾಲ ಮಂಚಿಲ ನಿವಾಸಿ, ಆಟೋ ಚಾಲಕ ಅಶ್ಪಾಕ್ (28) ಬಂಧಿತ ಆರೋಪಿಗಳು.
ಶನಿವಾರ ತಡರಾತ್ರಿ ನಡೆದಿದ್ದೇನು?:
ಶನಿವಾರ ಮಧ್ಯರಾತ್ರಿ ಸುಮಾರು 12:00 ರಿಂದ 12:20 ರ ವೇಳೆಗೆ ಮದ್ಯಪಾನ ಮಾಡಿದ್ದ ಆರೋಪಿಗಳು ಉಳ್ಳಾಲದ ಬಾರ್ ಹಾಗೂ ರೆಸ್ಟೋರೆಂಟ್ ಒಂದರ ಮುಂಭಾಗಕ್ಕೆ ಬಂದಿದ್ದಾರೆ. ಈ ವೇಳೆ ಕೈಯಲ್ಲಿ ತಲವಾರ್ ಹಿಡಿದು ಬಂದ ರೌಡಿ ಶೀಟರ್ ಮಹಮ್ಮದ್ ಶಾಕಿರ್, ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಬಾರ್ ಸಿಬ್ಬಂದಿಗೆ ತಲವಾರ್ ತೋರಿಸಿ ಬೆದರಿಕೆ ಹಾಕಿದ್ದಾನೆ. ಅಸಭ್ಯ ಶಬ್ದಗಳಿಂದ ಬೈಯುತ್ತಾ ದಾಂಧಲೆ ನಡೆಸಿ ಸಾರ್ವಜನಿಕ ಶಾಂತಿಗೆ ಭಂಗ ತಂದಿದ್ದಾನೆ.
ಘಟನೆ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರ ಸೂಚನೆಯಂತೆ ಕಾರ್ಯಾಚರಣೆ ನಡೆಸಿದ ಉಳ್ಳಾಲ ಠಾಣೆ ಪೊಲೀಸರು, ಇಬ್ಬರೂ ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ತಲವಾರನ್ನು ವಶಪಡಿಸಿಕೊಂಡಿದ್ದಾರೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ ಮಧ್ಯರಾತ್ರಿ ಸುಮಾರು 12:20ರ ವೇಳೆಗೆ ಬಾರ್ ಒಂದರ ಮುಂಭಾಗದಲ್ಲಿ ರೌಡಿ ಶೀಟರ್ ಮಹಮ್ಮದ್ ಶಾಕಿರ್ ಹಾಗೂ ಆಟೋ ಚಾಲಕ ಅಶ್ಪಾಕ್ ಆಟೋರಿಕ್ಷಾದಲ್ಲಿ ಬಂದು ಇಳಿಯುವುದು ಸ್ಪಷ್ಟವಾಗಿ ಸೆರೆಯಾಗಿದೆ. ಆಟೋರಿಕ್ಷಾದಿಂದ ಕೆಳಗಿಳಿದು ಬರುವ ಬಿಳಿ ಬಣ್ಣದ ಶರ್ಟ್ ಧರಿಸಿದ್ದ ಶಾಕಿರ್, ತನ್ನ ಕೈಯಲ್ಲಿ ತಂದಿದ್ದ ಬಟ್ಟೆಯಲ್ಲಿ ಸುತ್ತಿದ ಉದ್ದನೆಯ ತಲವಾರನ್ನು ಒಮ್ಮೆಲೆ ಹೊರತೆಗೆದು, ಬಾರ್‌ನ ಹೊರಗಡೆ ಕುಳಿತಿದ್ದ ಹಾಗೂ ನಿಂತಿದ್ದ ಸಾರ್ವಜನಿಕರತ್ತ ಅಸಭ್ಯ ಶಬ್ದಗಳಿಂದ ಬೈಯುತ್ತಾ ನುಗ್ಗುತ್ತಾನೆ.
ಆಟೋ ಚಾಲಕ ಅಶ್ಪಾಕ್ ಆತನ ಪಕ್ಕದಲ್ಲೇ ನಿಂತು ಬೆಂಬಲ ನೀಡುತ್ತಿದ್ದರೆ, ಶಾಕಿರ್ ತಲವಾರನ್ನು ಗಾಳಿಯಲ್ಲಿ ಬೀಸುತ್ತಾ, ಕಾಂಪೌಂಡ್‌ನ ಹೊರಗೆ ಹಾಗೂ ಮೆಟ್ಟಿಲುಗಳನ್ನು ಹತ್ತಿ ಬಾರ್‌ನ ಗೇಟ್ ಸಮೀಪದವರೆಗೂ ಹೋಗಿ ಸಾರ್ವಜನಿಕರಿಗೆ ಜೀವಬೆದರಿಕೆ ಹಾಕುತ್ತಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕಾನೂನು ರೀತ್ಯ ಪ್ರಕರಣ ದಾಖಲಾಗಿದ್ದು, ಇಂತಹ ಪುಂಡಾಟಿಕೆ ನಡೆಸುವ ರೌಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.
