ಎರಡು ವರ್ಷಗಳ ದೈಹಿಕ, ಮಾನಸಿಕ ಹಿಂಸೆ; ಕೆರಿಯರ್ ಹಾಗೂ ಲೈಫ್ ಮೇಲಾದ ಕಂಟ್ರೋಲಿಂಗ್ ಕಥೆ ಹೇಳಿದ ಕ್ಯೂಟ್ ನಟಿ!
ಚೆನ್ನೈ:
ದಕ್ಷಿಣ ಭಾರತದ ಜನಪ್ರಿಯ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ತಮ್ಮ ವೈಯಕ್ತಿಕ ಜೀವನದ ಕಠಿಣ ದಿನಗಳ ಹಾಗೂ ಬ್ರೇಕಪ್ ಕುರಿತು ಬಿಚ್ಚಿಟ್ಟಿರುವ ಆಘಾತಕಾರಿ ಸತ್ಯಗಳು ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿವೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ತಾವು ಬಲಿಪಶುವಾಗಿದ್ದ 'ನಾರ್ಸಿಸಿಸ್ಟಿಕ್ ಅಬ್ಯೂಸ್' (Narcissistic Abuse - ಶೋಷಣೆಯ ಮನಸ್ಥಿತಿ) ಹಾಗೂ ಅದರಿಂದ ಉಂಟಾದ ಮಾನಸಿಕ ನರಕವನ್ನು ಬಿಚ್ಚಿಟ್ಟಿದ್ದಾರೆ.
"ನಾನು ಆತ್ಮಹತ್ಯೆ ಮಾಡಿಕೊಂಡಿದ್ದರೆ ಪ್ರೀತಿ ತೋರಿಸುತ್ತಿದ್ದರೇನೋ?":
ತಮ್ಮ ಹಳೆಯ ಇನ್‌ಸ್ಟಾಗ್ರಾಮ್ ಪೋಸ್ಟ್ ಹಾಗೂ ದಿನಗಳ ನೆನಪು ಮಾಡಿಕೊಂಡ ಅನುಪಮಾ, "ಆ ಹಳದಿ ಉಡುಪಿನ ಫೋಟೋ ಹಾಕಿ 'ಅನುಪಮಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಬರೆದಿದ್ದರೆ, ಬಹುಶಃ ಇಂದು ಜನರು ನನ್ನ ಮೇಲೆ ಅಪಾರ ಪ್ರೀತಿ ತೋರುತ್ತಿದ್ದರು, ದೊಡ್ಡ ಚರ್ಚೆಗಳಾಗುತ್ತಿದ್ದವು. ಈ ಬ್ರೇಕಪ್ ವಿಷಯ ಜಗತ್ತಿಗೆ ತಿಳಿದು ತಿಂಗಳಿಗಿಂತ ಹೆಚ್ಚು ಸಮಯವಾಗಿದೆ. ನಾನು ಆ ಸಂಬಂಧದಲ್ಲಿ ಒಂಟಿಯಾಗುತ್ತಿದ್ದೇನೆ, ಖಿನ್ನತೆಗೆ ಒಳಗಾಗುತ್ತಿದ್ದೇನೆ ಎಂಬುದು ನನ್ನ ಕುಟುಂಬ, ಸ್ನೇಹಿತರು ಹಾಗೂ ಸಿಬ್ಬಂದಿಗೆ ಮೊದಲೇ ತಿಳಿದಿತ್ತು" ಎಂದು ಭಾವುಕರಾಗಿದ್ದಾರೆ.
ತನ್ನ ಮಾಜಿ ಪ್ರಿಯಕರನ ಸ್ವಭಾವದ ಬಗ್ಗೆ ವಿವರಿಸಿದ ನಟಿ, "ನಾರ್ಸಿಸಿಸ್ಟ್‌ಗಳು ತಮ್ಮನ್ನು ತಾವೇ ಪ್ರೀತಿಸುತ್ತಾರೆ ಎಂದು ಜನರು ಭಾವಿಸುತ್ತಾರೆ. ಆದರೆ ನಿಜದಲ್ಲಿ ಅವರು ತಮ್ಮನ್ನು ತಾವೇ ದ್ವೇಷಿಸಿಕೊಳ್ಳುತ್ತಾರೆ ಮತ್ತು ಕೀಳರಿಮೆಯಿಂದ ಬಳಲುತ್ತಿರುತ್ತಾರೆ. ಅವರಿಗೆ ಬೇಕಾಗಿರುವುದು ತಮ್ಮ ನಿಯಂತ್ರಣದಲ್ಲಿರುವ (Control) ಒಬ್ಬ ವ್ಯಕ್ತಿ. ಅವರು ಸದಾ ಗಮನ ಹಾಗೂ ಪ್ರಶಂಸೆಯನ್ನು ಬಯಸುತ್ತಾರೆ" ಎಂದಿದ್ದಾರೆ.
‘ಅನ್ನಿಯನ್’ ಸಿನಿಮಾದ ವಿಕ್ರಮ್‌ಗೆ ಮಾಜಿ ಪ್ರಿಯಕರನ ಹೋಲಿಕೆ!
ತಮ್ಮ ಪ್ರಿಯಕರನ ವರ್ತನೆಯನ್ನು ತಮಿಳಿನ 'ಅನ್ನಿಯನ್' (Anniyan) ಸಿನಿಮಾಗೆ ಹೋಲಿಸಿದ ಅನುಪಮಾ, "ಅವನೊಂದಿಗೆ ಜೀವಿಸುವುದು 'ಅನ್ನಿಯನ್' ಜೊತೆ ಬದುಕಿದಂತಿತ್ತು. ಒಂದು ದಿನ ಆತ 'ರೆಮೋ' ರೀತಿ ಅತ್ಯಂತ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದ, ನಾನೇ ಪ್ರಪಂಚದ ಅದೃಷ್ಟವಂತೆ ಎನ್ನಿಸುತ್ತಿತ್ತು. ಮರುದಿನವೇ ಆತ 'ಅನ್ನಿಯನ್' ತರ ಅತ್ಯಂತ ಕ್ರೂರವಾಗಿ ವರ್ತಿಸುತ್ತಿದ್ದ. ಮರುದಿನವೇ ಮಗುವಿನಂತೆ ಅತ್ತು, ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಿದ್ದ. ನಿಮ್ಮನ್ನು ತೀವ್ರವಾಗಿ ನೋಯಿಸುವ ವ್ಯಕ್ತಿಯೇ ಕೊನೆಗೆ ಸಮಾಧಾನಪಡಿಸುವ ನಾಟಕವಾಡುತ್ತಿದ್ದ. ತಪ್ಪು ನಮ್ಮದಲ್ಲದಿದ್ದರೂ ನಾವೇ ತಪ್ಪಿತಸ್ಥರು ಎಂಬ ಭಾವನೆ ಹುಟ್ಟಿಸುತ್ತಿದ್ದ" ಎಂದು ಕಣ್ಣೀರಿಟ್ಟಿದ್ದಾರೆ.
‘ಗೋಲ್ಡ್ ಡಿಗ್ಗರ್’ ಎಂದವರಿಗೆ ತಿರುಗೇಟು, ಕೆರಿಯರ್ ಮೇಲಾದ ಪ್ರಭಾವ:
ಮೂರು ತಿಂಗಳಲ್ಲೇ ನಿಶ್ಚಿತಾರ್ಥಕ್ಕೆ ಒತ್ತಡ ಹೇರಿದ್ದ ಘಟನೆಯನ್ನು ನೆನಪಿಸಿಕೊಂಡ ಅನುಪಮಾ, "ಫಸ್ಟ್ ಡೇಟ್ ಆದ ತಕ್ಷಣ ಮನೆಗೆ ಕರೆದೊಯ್ದು ಪರಿಚಯಿಸಿದ್ದ. 3 ತಿಂಗಳಲ್ಲಿ ಎಂಗೇಜ್‌ಮೆಂಟ್ ಮಾತುಕತೆ ಶುರುಮಾಡಿದ್ದರು. ಆದರೆ ನಾನು ಸಮಯ ಬೇಕು ಎಂದು ಆ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ನನ್ನನ್ನು 'ಗೋಲ್ಡ್ ಡಿಗ್ಗರ್' (ಹಣದಾಸೆಯವಳು) ಎಂದು ಕರೆಯುವವರಿಗೆ ಹೇಳಲು ಬಯಸುತ್ತೇನೆ, ನಾನು ಅಂದು ಆ ಮದುವೆಯನ್ನು ನಿರಾಕರಿಸದೇ ಹೋಗಿದ್ದರೆ ಇಂದು ನನ್ನ ಕಥೆ ಡಿವೋರ್ಸ್‌ನಲ್ಲಿ ಮುಕ್ತಾಯವಾಗುತ್ತಿತ್ತು. ನನ್ನ ಇಡೀ ಜೀವನ ಹಾಗೂ ಸಿನಿಮಾಗಳ ಆಯ್ಕೆಯನ್ನು ಆತ ನಿಯಂತ್ರಿಸಲು ಶುರುಮಾಡಿದ್ದ. ನನ್ನ ಕೆರಿಯರ್‌ನ ದೊಡ್ಡ ಹಿಟ್ 'ಡ್ರಾಗನ್' ಸಿನಿಮಾದ ಪ್ರಚಾರಕ್ಕೂ ನಾನು ಹೋಗಲು ಆತ ಬಿಡಲಿಲ್ಲ" ಎಂದು ಆಕ್ರೋಶ ಹೊರಹಾಕಿದ್ದಾರೆ.
ಇತ್ತೀಚೆಗೆ 'ಪೆಟ್ ಡಿಟೆಕ್ಟಿವ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅನುಪಮಾ, ಇದೀಗ ಈ ನರಕದ ಸಂಬಂಧದಿಂದ ಹೊರಬಂದು ಮತ್ತೆ ತಮ್ಮ ವೃತ್ತಿಜೀವನದತ್ತ ಗಮನ ಹರಿಸುತ್ತಿದ್ದಾರೆ.
