ಬಂಟ್ವಾಳ: ವ್ಯಾಪಾರದ ಹಣ ಸಂಗ್ರಹಿಸಿ ಬೈಕ್‌ನಲ್ಲಿ ವಾಪಸಾಗುತ್ತಿದ್ದ ಸಂಸ್ಥೆಯೊಂದರ ಉದ್ಯೋಗಿಗೆ ತಲವಾರು ತೋರಿಸಿ ಬೆದರಿಸಿ ಬರೋಬ್ಬರಿ 8,52,000 ರೂಪಾಯಿ ನಗದನ್ನು ಸುಲಿಗೆ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಮುಲ್ಕಾಜೆ ಮಾಡ ಎಂಬಲ್ಲಿ ನಡೆದಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಮಂಗಳೂರಿನ ಕಣ್ಣೂರು ಮೂಲದ ಸಿಮೆಂಟ್ ಹಾಗೂ ಕಬ್ಬಿಣ ಮಾರಾಟ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮಯ್ಯದಿ (40) ಹಣ ಕಳೆದುಕೊಂಡ ವ್ಯಕ್ತಿ.
ಘಟನೆಯ ವಿವರ: ಆಗಸ್ಟ್ 20ರಂದು ಮಯ್ಯದಿ ಅವರು ತಮ್ಮ ಸಂಸ್ಥೆಯ ವ್ಯವಹಾರದ ಬಾಕಿ ಹಣವನ್ನು ವಿವಿಧ ಅಂಗಡಿಗಳಿಂದ ವಸೂಲಿ ಮಾಡುವ ಸಲುವಾಗಿ ಬೈಕ್‌ನಲ್ಲಿ ತೆರಳಿದ್ದರು. ಹಲವು ಕಡೆಗಳಿಂದ ನಗದು ಸಂಗ್ರಹಿಸಿಕೊಂಡು ಬಂಟ್ವಾಳದ ಕಕ್ಕೆಪದವಿನಿಂದ ಪಾಣೆಮಂಗಳೂರಿಗೆ ಬೈಕ್‌ನಲ್ಲಿ ಮರಳುತ್ತಿದ್ದಾಗ, ಮಧ್ಯಾಹ್ನ ಸುಮಾರು 1 ಗಂಟೆಯ ಸುಮಾರಿಗೆ ಮಣಿನಾಲ್ಕೂರು ಮುಲ್ಕಾಜೆ ಮಾಡ ಎಂಬಲ್ಲಿ ಘಟನೆ ನಡೆದಿದೆ.
ಎರಡು ಬೈಕ್‌ಗಳಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ವರು ಅಪರಿಚಿತ ದುಷ್ಕರ್ಮಿಗಳು, ಮಯ್ಯದಿ ಅವರನ್ನು ಅಡ್ಡಗಟ್ಟಿ ಮಾರಕಾಸ್ತ್ರವಾದ ತಲವಾರು ತೋರಿಸಿ ಜೀವಬೆದರಿಕೆ ಹಾಕಿದ್ದಾರೆ. ಬಳಿಕ ಅವರ ಬಳಿಯಿದ್ದ ಸುಮಾರು 8,52,000 ರೂ. ನಗದು ಹಣವನ್ನು ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಕೃತ್ಯದ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆ ಮಾಹಿತಿ ನೀಡಿದೆ.