ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಮಂಗಳೂರು: ಕೊಣಾಜೆಯಲ್ಲಿ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ ಪ್ರಕರಣ; 3 ದಿನಗಳಲ್ಲೇ ಆರೋಪಿಗಳ ಸೆರೆ!

 


 


ಮಂಗಳೂರು: ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯ ಮೇಲೆ  ಹಲ್ಲೆ ನಡೆಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಕೇವಲ ಮೂರೇ ದಿನಗಳಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.

 

ಬಂಧಿತರನ್ನು ಮಂಗಳೂರಿನ ಉರ್ವ ನಿವಾಸಿ ಬಾಲ ಸುಬ್ರಮಣ್ಯ (49) ಹಾಗೂ ಮಣ್ಣಗುಡ್ಡ ನಿವಾಸಿ, ಆಟೋ ಚಾಲಕ ಶ್ಯಾಮ್ ಕುಮಾರ್ (33) ಎಂದು ಗುರುತಿಸಲಾಗಿದೆ.



ಬಾಡಿಗೆ ಮನೆ ನೆಪದಲ್ಲಿ ನುಗ್ಗಿ ಕೃತ್ಯ!

ಆಗಸ್ಟ್ 3ರಂದು ಮಧ್ಯಾಹ್ನ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ 76 ವರ್ಷದ ವೃದ್ಧ ಮಹಿಳೆಯೊಬ್ಬರು ಮನೆಯಲ್ಲಿದ್ದಾಗ, ಬಾಗಿಲು ತಟ್ಟಿದ ಶಬ್ದ ಕೇಳಿ ಹೊರಬಂದಿದ್ದಾರೆ. ವೇಳೆ 'ಮನೆ ಬಾಡಿಗೆಗೆ ಬೇಕಿದೆ' ಎಂದು ಮಾತನಾಡಿಸುತ್ತಲೇ ಬಾಗಿಲನ್ನು ಬಲವಂತವಾಗಿ ದೂಡಿದ ಆರೋಪಿಗಳು, ವೃದ್ಧೆಯನ್ನು ಕೆಳಗೆ ತಳ್ಳಿ ಹಲ್ಲೆ ನಡೆಸಿದ್ದಾರೆ. ಬಳಿಕ ಆಕೆಯ ಬಳಿಯಿದ್ದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ 24 ಗ್ರಾಂ ತೂಕದ ಚಿನ್ನದ ಸರ ಹಾಗೂ ಬಳೆಯನ್ನು ದೋಚಿ ಪರಾರಿಯಾಗಿದ್ದರು. ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.



ಘಟನೆ ನಡೆದ ತಕ್ಷಣ ಸಕ್ರಿಯರಾದ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ನಗರದಾದ್ಯಂತ ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಸುಳಿವುಗಳನ್ನು ಬೆನ್ನತ್ತಿದ ತಂಡವು, ಆಗಸ್ಟ್ 7ರಂದು ಮರೋಳಿ ಪ್ರದೇಶದಲ್ಲಿ ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರಿಂದ ದೋಚಲಾಗಿದ್ದ ಸಂಪೂರ್ಣ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.



ಹಳೆಯ ಖತರ್ನಾಕ್ ಕ್ರಿಮಿನಲ್!

ಬಂಧಿತ ಬಾಲ ಸುಬ್ರಮಣ್ಯ ಹಳೆಯ ಅಪರಾಧ ಹಿನ್ನೆಲೆ ಉಳ್ಳವನಾಗಿದ್ದು, ಈತನ ವಿರುದ್ಧ ಹಿಂದೆ ಬಜಪೆ, ಮುಲ್ಕಿ, ಮಂಗಳೂರು ಈಸ್ಟ್, ಮಂಗಳೂರು ನಾರ್ತ್ ಹಾಗೂ ಮಂಗಳೂರು ರೂರಲ್ ಠಾಣೆಗಳಲ್ಲಿ ಸುಲಿಗೆ ಹಾಗೂ ಕಳವು ಸೇರಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿವೆ.

 

ಎಸಿಪಿ ವಿಜಯ ಕ್ರಾಂತಿ ಅವರ ಮಾರ್ಗದರ್ಶನದಲ್ಲಿ ಉಳ್ಳಾಲ ಇನ್ಸ್ಪೆಕ್ಟರ್ ವಿರೂಪಾಕ್ಷ ಸ್ವಾಮಿ, ಕೊಣಾಜೆ ಪಿಎಸ್ಐಗಳಾದ ನಾಗರಾಜ್, ಪುನೀತ್ ಗಾಂವಕರ್ ಹಾಗೂ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

 

ಸಾರ್ವಜನಿಕರಿಗೆ ಪೊಲೀಸರ ಮನವಿ:

ಒಂಟಿ ಮಹಿಳೆಯರು ಅಥವಾ ಹಿರಿಯ ನಾಗರಿಕರಿರುವ ಮನೆಗಳಿಗೆ ಅಪರಿಚಿತರು ಬಂದಾಗ ತಕ್ಷಣ ಬಾಗಿಲು ತೆರೆಯದೆ ಜಾಗರೂಕರಾಗಿರಬೇಕು. ಮನೆ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳುವುದು ಸುರಕ್ಷತೆಯ ದೃಷ್ಟಿಯಿಂದ ಸೂಕ್ತ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.