Kadaba:-ಕೋಡಿಂಬಾಳದ ಸೈಂಟ್ ಜಾರ್ಜ್ ಮಲಂಕರ ಸಿರಿಯನ್ ಕ್ಯಾಥೋಲಿಕ್ ಚರ್ಚ್ ವಾರ್ಷಿಕ ಹಬ್ಬಕ್ಕೆ ಸಿದ್ಧತೆ. ಇದೇ ತಿಂಗಳ 24,25,26 ರಂದು ವಾರ್ಷಿಕ ಹಬ್ಬ

ಕಡಬ

ಕಡಬ ಸಮೀಪದ ಕೋಡಿಂಬಾಳದಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸೈಂಟ್ ಜಾರ್ಜ್ ಮಲಂಕರ ಸಿರಿಯನ್ ಕ್ಯಾಥೋಲಿಕ್ ಚರ್ಚ್‌ನ ವಾರ್ಷಿಕ ಹಬ್ಬವು ಏಪ್ರಿಲ್ 24ರಿಂದ 26ರವರೆಗೆ ಮೂರು ದಿನಗಳ ಕಾಲ ಭಕ್ತಿಭಾವದಿಂದ ನಡೆಯಲಿದ್ದು, ಈಗಾಗಲೇ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. 

ಚರ್ಚ್‌ನ ಪರಮ ಮಧ್ಯಸ್ಥರಾದ ಸಂತ ಗೀವರ್ಗೀಸ್ ಸಹದಾ ಅವರ ನಾಮದಲ್ಲಿ ನಡೆಯುವ ಈ ಹಬ್ಬವು ಪ್ರತಿ ವರ್ಷವೂ ನೂರಾರು ಭಕ್ತರನ್ನು ಆಕರ್ಷಿಸುವ ವಿಶೇಷ ಆಧ್ಯಾತ್ಮಿಕ ಆಚರಣೆಯಾಗಿದೆ.
ಹಬ್ಬದ ಕಾರ್ಯಕ್ರಮಗಳು ಏಪ್ರಿಲ್ 24ರಂದು ಸಂಜೆ 4.45ಕ್ಕೆ ಧ್ವಜಾರೋಹಣದೊಂದಿಗೆ ಆರಂಭಗೊಳ್ಳಲಿದೆ. ಚರ್ಚ್ ವಿಕಾರ್ ರೆವರೆಂಡ್ ಫಾದರ್ ಲೂಕೋಸ್ ತನಿಯಿಲ್ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಸಂಜೆ 5 ಗಂಟೆಗೆ ಸಂಧ್ಯಾ ಪ್ರಾರ್ಥನೆ ಹಾಗೂ ಹಬ್ಬದ ಪವಿತ್ರ ದಿವ್ಯ ಬಲಿಪೂಜೆ ನಡೆಯಲಿದೆ. ಈ ಪೂಜೆಯಲ್ಲಿ ಪುತ್ತೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆ.ಫಾ.ಡಾ. ಎಲ್ದೋ ಪುತ್ತನ್ಕಂಡಂತಿಲ್ ಕೋರ್-ಎಪಿಸ್ಕೋಪಾ ಮುಖ್ಯಕಾರ್ಮಿಕರಾಗಿ ಭಾಗವಹಿಸಲಿದ್ದಾರೆ. ಬಳಿಕ ಸ್ಮಶಾನದಲ್ಲಿ ಮೃತರಿಗಾಗಿ ಧೂಪದ್ರವ್ಯ ಪ್ರಾರ್ಥನೆ ನಡೆಯಲಿದ್ದು, ರಾತ್ರಿ ಮಕ್ಕಳಿಂದ ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಎರಡನೇ ದಿನವಾದ ಏಪ್ರಿಲ್ 25ರಂದು ಸಂಜೆ 4.30ಕ್ಕೆ ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ರೆ.ಡಾ. ಗೀವರ್ಗೀಸ್ ಮಾರ್ ಮಕಾರಿಯೋಸ್ ಅವರಿಗೆ ಭವ್ಯ ಸ್ವಾಗತ ಕೋರಲಾಗುತ್ತದೆ. ಸಂಜೆ 5 ಗಂಟೆಗೆ ಸಂಧ್ಯಾ ಪ್ರಾರ್ಥನೆ ಹಾಗೂ ಪವಿತ್ರ ದಿವ್ಯ ಬಲಿಪೂಜೆ ನಡೆಯಲಿದ್ದು, ಬಿಷಪ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ. ಸಂಜೆ 7 ಗಂಟೆಗೆ ಕಲ್ಲಂತಡ್ಕ ಶಿಲುಬೆ ಗೋಪುರದವರೆಗೆ ಭಕ್ತಿಪೂರ್ವಕ ಉತ್ಸವ ಮೆರವಣಿಗೆ ನಡೆಯಲಿದೆ. ಬಳಿಕ ರಾತ್ರಿ 8.30ಕ್ಕೆ ಸಮಾರೋಪ ಆಶೀರ್ವಚನ ಹಾಗೂ ಭಕ್ತರಿಗೆ ಔತಣಕೂಟ ವ್ಯವಸ್ಥೆ ಮಾಡಲಾಗಿದೆ.

ಕೊನೆಯ ದಿನವಾದ ಏಪ್ರಿಲ್ 26ರಂದು ಬೆಳಗ್ಗೆ 9 ಗಂಟೆಗೆ ಮುಂಜಾನೆ ಪ್ರಾರ್ಥನೆ ನಡೆಯಲಿದ್ದು, 9.30ಕ್ಕೆ ಹಬ್ಬದ ವಿಶೇಷ ಪವಿತ್ರ ದಿವ್ಯ ಬಲಿಪೂಜೆ ನಡೆಯಲಿದೆ. ಬೈಂದೂರು ಸೇಂಟ್ ಥಾಮಸ್ ಶಾಲೆಯ ಪ್ರಾಂಶುಪಾಲರಾದ ರೆವರೆಂಡ್ ಫಾದರ್ ಫಿಲಿಪ್ ನೆಲ್ಲಿವಿಳ ಮುಖ್ಯಕಾರ್ಮಿಕರಾಗಿ ಭಾಗವಹಿಸಲಿದ್ದಾರೆ. ಸಹಕಾರ್ಮಿಕರಾಗಿ ರೆ.ಫಾ. ಫ್ರಾನ್ಸಿಸ್ ತೆಕ್ಕೆಪೂಕ್ಕಲಂ ಮತ್ತು ರೆ.ಫಾ. ವಿಜೋಯ್ ತೆಕ್ಕೆಪೂಕ್ಕಲಂ ಉಪಸ್ಥಿತರಿರಲಿದ್ದಾರೆ. ಬಳಿಕ ಹಬ್ಬದ ಮೆರವಣಿಗೆ, ಸಮಾರೋಪ ಆಶೀರ್ವಾದ ಮತ್ತು ಪ್ರಸಾದ ವಿತರಣೆ ನಡೆಯಲಿದೆ.

ಚರ್ಚ್ ವಾರ್ಷಿಕ ಹಬ್ಬದಲ್ಲಿ ಭಾಗವಹಿಸಿ ಸಂತ ಗೀವರ್ಗೀಸ್ ಅವರ ಮಧ್ಯಸ್ಥಿಕೆಯಿಂದ ದೇವರ ಆಶೀರ್ವಾದವನ್ನು ಪಡೆಯುವಂತೆ ಎಲ್ಲರಿಗೂ ಆಹ್ವಾನ ನೀಡಲಾಗಿದೆ. 

ಹಬ್ಬದ ವ್ಯವಸ್ಥೆಯನ್ನು ಚರ್ಚ್ ಅಧ್ಯಕ್ಷ ಶ್ರೀ ವರ್ಗೀಸ್ ತೆಕ್ಕೆಪೂಕ್ಕಲಂ, ಕಾರ್ಯದರ್ಶಿ ಶ್ರೀ ಸಂದೀಪ್ ಎರವುಚಿರ ಹಾಗೂ ವಿಕಾರ್ ರೆವರೆಂಡ್ ಫಾದರ್ ಲೂಕೋಸ್ ತನಿಯಿಲ್ ಅವರ ನೇತೃತ್ವದಲ್ಲಿ ವಿವಿಧ ಸಮಿತಿಗಳು ಕೈಗೊಂಡಿದೆ.
BREAKING NEWS
Loading latest news...
Join our WhatsApp Channel Powered By : Online Pudu