ಡಾ.ರಾಜ್ ಅಭಿನಯದ ಕನ್ನಡ ಸಿನಿಮಾ 'ಶ್ರೀ ಕೃಷ್ಣದೇವರಾಯ'ದ ಹಾಡು ಹಂಚಿಕೊಂಡ ಪಿಎಂ ಮೋದಿ- ಕಾರಣ ಹೀಗಿದೆ





ಬೆಂಗಳೂರು: ಚೈತ್ರ ನವರಾತ್ರಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕನ್ನಡ‌ ಸಿನಿಮಾವೊಂದರ ಭಕ್ತಿಗೀತೆಯೊಂದನ್ನು ತಮ್ಮ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡು ದೇಶದ ಜನತೆಗೆ ಶುಭಕೋರಿದ್ದಾರೆ.

ಕನ್ನಡದ ವರನಟ ಡಾ ರಾಜಕುಮಾ‌ರ್ ಅವರು ಅಭಿನಯಿಸಿರುವ ಕನ್ನಡದ ಪ್ರಸಿದ್ಧ ಸಿನಿಮಾ 'ಶ್ರೀ ಕೃಷ್ಣದೇವರಾಯ'ದ 'ಶ್ರೀ ಚಾಮುಂಡೇಶ್ವರಿ, ಅಮ್ಮ ಶ್ರೀ ಚಾಮುಂಡೇಶ್ವರಿ' ಎಂಬ ವಿಡಿಯೊ ಭಕ್ತಿಗೀತೆಯ ಯೂಟ್ಯೂಬ್ ಲಿಂಕ್‌ನ್ನು ಪ್ರಧಾನಿ ಅವರು ಹಂಚಿಕೊಂಡಿದ್ದು ಗಮನ ಸೆಳೆದಿದೆ.

ವಿಶ್ವಮಾತೆಯ ಮೇಲಿನ ಅಚಲ ನಂಬಿಕೆಯು ಆಕೆಯ ಭಕ್ತರಲ್ಲಿ ಹೊಸ ಪ್ರಜ್ಞೆ ಮತ್ತು ಚೈತನ್ಯವನ್ನು ತುಂಬುತ್ತದೆ ಎಂದು ಮೋದಿ ಅವರು ಚೈತ್ರ ನವರಾತ್ರಿಯ ಶುಭಾಶಯಗಳನ್ನು ಜನತೆಗೆ ತಿಳಿಸಿದ್ದಾರೆ.

ಪ್ರಖ್ಯಾತ ನಿರ್ದೇಶಕ ಬಿ.ಆ‌ರ್.ಪಂತಲು ಅವರು ನಿರ್ದೇಶಿಸಿದ್ದ ಶ್ರೀ ಕೃಷ್ಣದೇವರಾಯ ಸಿನಿಮಾ 1970 ರಲ್ಲಿ ಬಿಡುಗಡೆಯಾಗಿ ಸಾಕಷ್ಟು ಜನಪ್ರಿಯವಾಗಿತ್ತು. ಈ ಸಿನಿಮಾದಲ್ಲಿ ಡಾ. ರಾಜಕುಮಾ‌ರ್, ಭಾರತಿ, ಜಯಂತಿ, ಆ‌ರ್.ನಾಗೇಂದ್ರರಾವ್, ಬಿ.ಆರ್.ಪಂತುಲು, ನರಸಿಂಹರಾಜು, ದಿನೇಶ್, ಎಂ.ವಿ.ರಾಜಮ್ಮ, ಆರ್.ನಾಗೇಂದ್ರ ರಾವ್, ಚಿಂದೋಡಿ ಲೀಲಾ ಸೇರಿದಂತೆ ಬಹುದೊಡ್ಡ ತಾರಾಗಣವಿತ್ತು. 

ಭಾರತೀಯ ಸಂಪ್ರದಾಯದಂತೆ ಯಗಾದಿಯ ಮುಂದಿನ ಒಂಬತ್ತು ದಿನಗಳನ್ನು ಹೆಚ್ಚಾಗಿ ಉತ್ತರ ಭಾರತದಲ್ಲಿ ಚೈತ್ರ ನವರಾತ್ರಿ ಎಂದು ಆಚರಿಸುತ್ತಾರೆ. ಈ ವರ್ಷ ಮಾರ್ಚ್ 19ರಿಂದ ಮಾರ್ಚ್‌ 27ರವರೆಗೆ ಚೈತ್ರ ನವರಾತ್ರಿ ಆಚರಿಸಲ್ಪಡುತ್ತದೆ.

ಮಾರ್ಚ್ 27 ರಂದು ರಾಮನವಮಿ ಹಬ್ಬದೊಂದಿಗೆ ಚೈತ್ರ ನವರಾತ್ರಿ ಅಂತ್ಯವಾಗುತ್ತದೆ. ಚೈತ್ರ ನವರಾತ್ರಿಯನ್ನು ದಕ್ಷಿಣ ಭಾರತದಲ್ಲಿ ಯುಗಾದಿ ಹಬ್ಬ ಎಂದು ಆಚರಿಸುತ್ತಾರೆ.