ಶಬರಿಮಲೆ ಚಿನ್ನ ಕಳವು ಪ್ರಕರಣ: ಪ್ರಧಾನ ತಂತ್ರಿ ಕಂಠರಾರು ರಾಜೀವಾರ್ ಅರೆಸ್ಟ್



ತಿರುವನಂತಪುರಂ: ಶಬರಿಮಲೆ ಕ್ಷೇತ್ರದ ಚಿನ್ನ ಕಳವು ಪ್ರಕರಣದಲ್ಲಿ ಸನ್ನಿಧಾನದ ಪ್ರಧಾನ ತಂತ್ರಿ ಕಂಠರಾರು ರಾಜೀವಾರ್ ಅವರನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಬೆಳಗ್ಗೆ ರಹಸ್ಯ ಕೇಂದ್ರಕ್ಕೆ ವಿಚಾರಣೆಗೆ ಕರೆಸಿದ್ದ ವಿಶೇಷ ತನಿಖಾ ತಂಡ ತಂತ್ರಿಯವರನ್ನು ವಶಕ್ಕೆ ಪಡೆದಿದೆ.

ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಪೊಲೀಸರು ಅರೆಸ್ಟ್ ಮಾಡಿದ್ದಾರೆ‌. ಬಳಿಕ ಹೆಚ್ಚಿನ ತನಿಖೆಗಾಗಿ ಕ್ರೈಂ ಬ್ಯಾಂಚ್ ಕಚೇರಿಗೆ ಕರೆದೊಯ್ದಿದ್ದಾರೆ. ಚಿನ್ನ ಕಳವು ಪ್ರಕರಣದಲ್ಲಿ ತಂತ್ರಿಗಳ ಪಾತ್ರದ ಬಗ್ಗೆ ಶಂಕೆ ಈ ಹಿಂದೆಯೇ ಇದ್ದರೂ, ಇತರೇ ಆರೋಪಿಗಳ ಅರೆಸ್ಟ್, ಸಾಕ್ಷ್ಯ ಸಂಗ್ರಹ ಎಲ್ಲದರಲ್ಲೂ ರಹಸ್ಯ ಕಾಯ್ದುಕೊಂಡು ಬಂಧನ ಕ್ರಮ ಕೈಗೊಂಡಿದೆ. ತಂತ್ರಿಗಳು ಬಂಧನಕ್ಕೂ ಮುನ್ನ ನಿರೀಕ್ಷಣಾ ಜಾಮೀನು ಪಡೆಯಬಹುದೆಂಬ ನೆಲೆಯಲ್ಲಿ ಯಾವುದೇ ಸುಳಿವು ಬಿಟ್ಟುಕೊಡದೆ ಕಾರ್ಯಾಚರಣೆ ನಡೆಸಿದ್ದರು. ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಾಜಿ ಅಧ್ಯಕ್ಷ ಪದ್ಮಕುಮಾರ್ ಅರೆಸ್ಟ್, ಜಾಮೀನು ಅರ್ಜಿಯಲ್ಲೂ ತಂತ್ರಿಗಳ ಪಾತ್ರವನ್ನು ತೋರಿಸದೆ ಎಸ್ಐಟಿ ವಿಶೇಷ ಕಾಳಜಿ ವಹಿಸಿತ್ತು.

ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋಟ್ಟಿಯನ್ನು ಸನ್ನಿಧಾನದೊಳಗೆ ಬಿಟ್ಟುಕೊಂಡಿರುವುದು, ಬೇಕಾಬಿಟ್ಟಿ ಸ್ವಾತಂತ್ರ್ಯ ಒದಗಿಸಿದ್ದಕ್ಕೆ ಪ್ರಧಾನ ತಂತ್ರಿಗಳೇ ಕಾರಣ ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿತ್ತು. ಶಬರಿಮಲೆಯಿಂದ ಒಮ್ಮೆ ಹೊರ ಹಾಕಲ್ಪಟ್ಟ ಪೋಟ್ಟಿಯನ್ನು ಪ್ರಾಯೋಜಕತ್ವದ ಮೇರೆಯಲ್ಲಿ ಮತ್ತೆ ಶಬರಿಮಲೆಗೆ ಕರೆಸಿರುವುದು ಕಂಠರಾರು ರಾಜೀವರ್ ಆಗಿದ್ದರು ಎಂದು ತನಿಖಾ ತಂಡ ಪತ್ತೆಹಚ್ಚಿದೆ. ನಾನಾ ಹಂತಗಳಲ್ಲಿ ನಡೆದ ಚಿನ್ನ ಲೂಟಿಯ ಬಗ್ಗೆ ತಂತ್ರಿಗಳಿಗೆ ತಿಳಿದಿತ್ತು ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ. 

ಶಬರಿಮಲೆ ಸನ್ನಿಧಾನಕ್ಕೆ ಸಂಬಂಧಿಸಿದ ಯಾವುದೇ ವಿಚಾರಗಳಿಗೂ ಪ್ರಧಾನ ತಂತ್ರಿಯ ಅನುಮತಿ ಬೇಕಾಗುತ್ತದೆ. ದ್ವಾರಗಳಿಗೆ ಚಿನ್ನ ಲೇಪನ, ಅವುಗಳ ದುರಸ್ತಿ ವಿಚಾರದಲ್ಲಿ ಪ್ರಧಾನ ತಂತ್ರಿಗೆ ತಿಳಿಯದೆ ಆಗಿರಲು ಸಾಧ್ಯವಿಲ್ಲ. ಹೀಗಾಗಿ ಎಸ್‌ಐಟಿ ತಂಡಕ್ಕೆ ಮೊದಲೇ ಮಾಹಿತಿ ಇತ್ತಾದರೂ ಒಬ್ಬೊಬ್ಬರನ್ನೇ ಬಂಧನ ಮಾಡುತ್ತ ಬಂದಿದೆ.