ಕೇಂದ್ರ ಸರಕಾರವು ದೇಶದ ಕಾರ್ಮಿಕ ವರ್ಗವನ್ನು ದುರ್ಬಲಗೊಳಿಸಿ ಮತ್ತೆ ಗುಲಾಮಗಿರಿಯತ್ತ ತಳ್ಳಲು, ಕಾರ್ಮಿಕರ ಹಕ್ಕು ಭಾಧ್ಯತೆಗಳನ್ನು ನಾಶ ಮಾಡಲು, ಕಾರ್ಮಿಕ ಚಳುವಳಿಯನ್ನೇ ಹತ್ತಿಕ್ಕಲು ಹಾಗೂ ಬಂಡವಾಳಿಗರ ಹಿತಾಸಕ್ತಿಗಳನ್ನು ಕಾಪಾಡಲು ದೇಶದ ಪ್ರಮುಖ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಕಾರ್ಪೊರೇಟ್ ಪರವಾದ 4 ಸಂಹಿತೆಗಳನ್ನು ರೂಪಿಸಿ ತಕ್ಷಣದಿಂದಲೇ ಜಾರಿಯಾಗುವಂತೆ ಏಕಪಕ್ಷೀಯ ತೀರ್ಮಾನವನ್ನು ಕೈಗೊಂಡಿದೆ.ಆದ್ದರಿಂದ ಇದು ಕೇವಲ ಲೇಬರ್ ಕೋಡ್ ಅಲ್ಲ ಬದಲಾಗಿ ಕಾರ್ಪೊರೇಟ್ ಕೋಡ್ ಆಗಿದೆ ಎಂದು CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಕಾರ್ಮಿಕ ಸಂಹಿತೆಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಅವರು ಕಾರ್ಮಿಕ ಸಂಹಿತೆಗಳ ವಿರುದ್ದ ಫೆಬ್ರವರಿ 12 ರಂದು ನಡೆಯಲಿರುವ ಆಖಿಲ ಭಾರತ ಮಹಾಮುಷ್ಕರದ ಪ್ರಚಾರಾರ್ಥವಾಗಿ ಮುಲ್ಕಿಯಿಂದ ಪ್ರಾರಂಭಗೊಂಡ ಪಾದಯಾತ್ರೆಯನ್ನು ಉದ್ಘಾಟಿಸುತ್ತಾ ಈ ಮಾತುಗಳನ್ನು ಹೇಳಿದರು.
ಮುಂದುವರಿಸುತ್ತಾ ಅವರು, ರೈತ ವಿರೋಧಿ ಬೀಜ ಮಸೂದೆ ಹಾಗೂ ವಿದ್ಯುತ್ ಮಸೂದೆಯನ್ನು ಜಾರಿಗೊಳಿಸಲು ಹುನ್ನಾರ ನಡೆಸುತ್ತಿರುವ ಕೇಂದ್ರ ಸರಕಾರವು ಎಲ್ಲಾ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುವ ಮೂಲಕ ಇಡೀ ದೇಶವನ್ನೇ ಕಾರ್ಪೊರೇಟ್ ಕಂಪೆನಿಗಳ ಪಾದತಲಕ್ಕೆ ಒಪ್ಪಿಸಲು ಸನ್ನದ್ದವಾಗಿದೆ ಎಂದು ಹೇಳಿದರು.
