ನೊಂದವರಿಗೆ ಸಹಾಯ ಮಾಡುವುದು ದೇವರ ಸೇವೆ ತಣ್ಣೀರುಬಾವಿಯಲ್ಲಿ ಬೀಚ್ ಫೆಸ್ಟಿವಲ್‌ಗೆ ಚಾಲನೆಗೈದು ಶರವು ರಾಘವೇಂದ್ರ ಶಾಸ್ತ್ರಿ

 




ಮಂಗಳೂರು : ಕ್ಯಾನ್ಸರ್ ರೋಗಿಗಳಿಗೆ ಸೇವೆ ನೀಡುತ್ತಿರುವ ತಪಸ್ಯ ಫೌಂಡೇಶನ್ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಹಯೋಗದಲ್ಲಿ ಮಂಗಳೂರು ಟ್ರಯಥ್ಲಾನ್ ಮತ್ತು ಆಲ್ ಕಾರ್ಗೋ ಮಂಗಳೂರು ಇದರ ವತಿಯಿಂದ ನಡೆಯುತ್ತಿರುವ ಬೀಚ್ ಫೆಸ್ಟಿವಲ್‌ಗೆ ಶುಕ್ರವಾರ ತಣ್ಣೀರುಬಾವಿಯಲ್ಲಿ ಚಾಲನೆ ನೀಡಲಾಯಿತು.

ಶರವು ಶ್ರೀ ಮಹಾಗಣಪತಿ ದೇವಳದ ಮ್ಯಾನೇಜಿಂಗ್ ಟ್ರಸ್ಟಿ ಶರವು ರಾಘವೇಂದ್ರ ಶಾಸ್ತ್ರಿ ಅವರು ಮುಖ್ಯ ಅತಿಥಿಯಾಗಿದ್ದರು. ಸಮಾಜದಲ್ಲಿ ನೊಂದವರಿಗೆ ಸಹಾಯ ಮಾಡಿದರೆ ದೇವರು ಮೆಚ್ಚುತ್ತಾರೆ. ತಪಸ್ಯ ಫೌಂಡೇಶನ್ ಮೂಲಕ ಸಬಿತಾ ಶೆಟ್ಟಿ ಅವರು ಕ್ಯಾನ್ಸರ್ ಪೀಡಿತರಿಗೆ ಸಹಾಯ ಮಾಡುವ ದೊಡ್ಡ ಗುಣವನ್ನು ಅಳವಡಿಸಿಕೊಂಡಿದ್ದಾರೆ. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಬೀಚ್ ಫೆಸ್ಟಿವಲ್ ಹಮ್ಮಿಕೊಂಡಿದ್ದಾರೆ. ಆದರ್ಶ ಮಹಿಳೆಯಾಗಿರುವ ಅವರ ಸಮಾಜಮುಖಿ ಕೆಲಸಗಳಿಗೆ ಬೆನ್ನೆಲುಬಾಗಿ ನಿಲ್ಲೋಣ ಎಂದರು.



ಜಮಾಅತೆ ಇಸ್ಲಾಮಿ ಹಿಂದ್‌ನ ಕಾರ್ಯದರ್ಶಿ ಮೊಹಮ್ಮದ್ ಕುಂಞಿ ಎಂ.ಎಚ್., ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ರೆ.ಫಾ.ವಿಲ್ಪ್ರೆಡ್ ಡಿಸೋಜ, ಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಪಶ್ಚಿಮ ಬಂಗಾಳದ ನಿವೃತ್ತ ಡಿಜಿಪಿ ಡಾ.ಬಿ.ಎನ್. ರಮೇಶ್  ಐಪಿಎಸ್, ಆಲ್‌ಕಾರ್ಗೋ ಲಾಜಿಸ್ಟಿಕ್ಸ್‌ನ ಸಿಇಒ ಸುರೇಶ್ ಕುಮಾರ್  ಮುಖ್ಯ ಅತಿಥಿಗಳಾಗಿ ಬೀಚ್ ಉತ್ಸವಕ್ಕೆ ಶುಭ ಹಾರೈಸಿದರು. 

ತಪಸ್ಯ ಫೌಂಡೇಶನ್ ನಿರ್ದೇಶಕಿ ಸಬಿತಾ ಆರ್. ಶೆಟ್ಟಿ ಸ್ವಾಗತಿಸಿದರು. ಸಂಯೋಜಕರಾದ ನವೀನ್ ಹೆಗ್ಡೆ, ರಿತೇಶ್, ಅರವಿಂದ್, ಕರುಣಾಕರ್, ರಮಾನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯ ಮಟ್ಟದ ಬೀಚ್ ಕುಸ್ತಿ, ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ, ಮಕ್ಕಳಿಗೆ ಐಟಿ ಕ್ವಿಜ್, ಬೀಚ್ ಮ್ಯಾರಥಾನ್, ಡುಯಾಥ್ಲಾನ್, 40ಕೆ ಡೀಮ್ ಡಿಸ್ಟನ್ಸ್ ಟ್ರಯಾಥ್ಲಾನ್, ಸ್ಟಂಟ್ ಟ್ರಯಾಥ್ಲಾನ್, ಟೀಮ್ ರಿಲೇ ಟ್ರಯಾಥಾನ್, 1000 ಮೀಟರ್ ಡೀಮ್ ಸ್ವಿಮ್, 500 ಮೀ. ಫನ್ ಸ್ವಿಮ್, ಅಕ್ವಾಥಾನ್, ಫುಲ್ ಮ್ಯಾರಥಾನ್, ಹಾಫ್ ಮ್ಯಾರಥಾನ್, 10 ಕೆ ಡೀಮ್ ರನ್, 5ಕೆ ಫನ್ ರನ್ ಹೀಗೆ ವಿವಿಧ ರೀತಿಯ ಸ್ಪರ್ಧೆಗಳು ಕಡಲ ಕಿನಾರೆಯಲ್ಲಿ ಜ.11ರ ತನಕ ನಡೆಯುತ್ತಿದೆ. ದೇಶ- ವಿದೇಶದ ಸ್ಪರ್ಧಿಗಳು ಭಾಗವಹಿಸಿದ್ದಾರೆ.  ಬೈಕ್ ಸ್ಟಂಟ್ ಶೋ, ಬ್ಯಾಟಲ್ ಆಫ್ ಬ್ಯಾಂಡ್ಸ್, ಫ್ಯಾಶನ್ ಶೋ, ಥ್ರೋ ಬಾಲ್ ವಿಶೇಷ ಆಕರ್ಷಣೆಯಾಗಿದೆ. 


ತಣ್ಣೀರುಬಾವಿಯಲ್ಲಿ ಬೀಚ್ ಫೆಸ್ಟಿವಲ್ ಉದ್ಘಾಟನಾ ಸಮಾರಂಭದಲ್ಲಿ ಶರವು ರಾಘವೇಂದ್ರ ಶಾಸ್ತ್ರಿ, ಮೊಹಮ್ಮದ್ ಕುಂಞಿ ಎಂ.ಎಚ್., ವಿಲ್ಪ್ರೆಡ್ ಡಿಸೋಜ,ಪ್ರದೀಪ್ ಡಿಸೋಜ ಮೊದಲಾದವರಿದ್ದರು.