ವಿಜಯಲಕ್ಷ್ಮಿ ದರ್ಶನ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅಸಭ್ಯ ಕಾಮೆಂಟ್: ಇಬ್ಬರು Arest

 
ಬೆಂಗಳೂರು: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಮತ್ತು ನಿಂದನಾತ್ಮಕ ಕಾಮೆಂಟ್‌ಗಳನ್ನು ಮಾಡಿದ ಆರೋಪದಲ್ಲಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಬೆಂಗಳೂರಿನ ಚಿಕ್ಕಬಾಣಾವರ ನಿವಾಸಿ 45 ವರ್ಷದ ಆಟೋ ಚಾಲಕ ಚಂದ್ರಶೇಖರ್ ಮತ್ತು ದಾವಣಗೆರೆಯ 31 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ನಿತಿನ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಇನ್‌ಸ್ಟಾಗ್ರಾಂ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ವಿಜಯಲಕ್ಷ್ಮಿ ಅವರ ಕುರಿತು ಅವಾಚ್ಯ ಶಬ್ದಗಳನ್ನು ಬಳಸಿ ಕಾಮೆಂಟ್ ಮಾಡಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿದೆ.

ವಿಜಯಲಕ್ಷ್ಮಿ ಅವರು ಡಿಸೆಂಬರ್‌ನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ದೂರು ನೀಡಿದ್ದರು. ತಮ್ಮ ಮತ್ತು ಕುಟುಂಬ ಸದಸ್ಯರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಸಭ್ಯ ಪೋಸ್ಟ್‌ಗಳು ಮತ್ತು ಕಾಮೆಂಟ್‌ಗಳು ಬರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ದೂರಿನಲ್ಲಿ ಸುಮಾರು 15-18 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಕ್ರಮ ಕೋರಿದ್ದರು. ಇದರ ಭಾಗವಾಗಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆದಿದೆ.

ಈ ಹಿಂದೆ ದಾವಣಗೆರೆಯಲ್ಲಿ 'ಡೆವಿಲ್' ಸಿನಿಮಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಜಯಲಕ್ಷ್ಮಿ ಅವರು, ದರ್ಶನ್ ಅಭಿಮಾನಿಗಳು ಯಾವುದೇ ವಿಮರ್ಶೆಗೆ ತಲೆಕೆಡಿಸಿಕೊಳ್ಳಬಾರದು ಮತ್ತು ಶಾಂತಿಯುತವಾಗಿರಬೇಕು ಎಂದು ಮನವಿ ಮಾಡಿದ್ದರು. ಆದರೆ ಈ ಹೇಳಿಕೆಯ ನಂತರ ಅಸಭ್ಯ ಕಾಮೆಂಟ್‌ಗಳು ಹೆಚ್ಚಾದವು ಎಂದು ಆರೋಪಿಸಲಾಗಿದೆ.

ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ಇತರ ಖಾತೆಗಳ ಬಗ್ಗೆಯೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಸಾಮಾಜಿಕ ಮಾಧ್ಯಮದಲ್ಲಿ ಅಸಭ್ಯತೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಬಂಧನ ಮಹತ್ವದ್ದಾಗಿದೆ.