ಮಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆಯೆ ಪೊಲೀಸರಿಗೆ ಸಿಕ್ಕಿಬಿದ್ದರು 52 ಡ್ರಗ್ಸ್ ಸೇವಿಸಿದವರು!

ಮಂಗಳೂರು: ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಸುರಕ್ಷತೆ ಮತ್ತು ಮಾದಕ ದ್ರವ್ಯ ರಹಿತ ಪರಿಸರ ಕಾಪಾಡುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆಯು ವ್ಯಾಪಕ ತಪಾಸಣಾ ಕಾರ್ಯಾಚರಣೆಯನ್ನು ಕೈಗೊಂಡಿದೆ. ಈ ಡ್ರೈವ್‌ನಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಶಂಕಿತರನ್ನು ಪರಿಶೀಲನೆಗೊಳಪಡಿಸಲಾಗಿದ್ದು, ಅವರಲ್ಲಿ 52 ಜನರು ಮಾದಕ ದ್ರವ್ಯ ಸೇವಿಸಿದ್ದು ದೃಢಪಟ್ಟಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ನಗರದ ವಿವಿಧ ಪೊಲೀಸ್ ಠಾಣೆಗಳ ಸಿಬ್ಬಂದಿ ಈ ತಪಾಸಣೆಯಲ್ಲಿ ಭಾಗಿಯಾಗಿದ್ದು, ಇದರಿಂದ ಮಾದಕ ದ್ರವ್ಯ ಸೇವನೆಯ ಪ್ರವೃತ್ತಿಯನ್ನು ಅರ್ಥೈಸಿಕೊಂಡು ಭವಿಷ್ಯದಲ್ಲಿ ತಡೆಗಟ್ಟುವ ಕ್ರಮಗಳನ್ನು ಇನ್ನಷ್ಟು ಬಲಪಡಿಸಲು ನೆರವಾಗಲಿದೆ ಎಂದು ಆಯುಕ್ತರು ಹೇಳಿದ್ದಾರೆ.

ಪತ್ತೆಯಾದ 52 ಜನರಲ್ಲಿ 25 ಮಂದಿ ವಿದ್ಯಾರ್ಥಿಗಳಾಗಿದ್ದು, ಅವರಲ್ಲಿ 2 ಸ್ಥಳೀಯರು ಮತ್ತು 23 ಮಂದಿ ಜಿಲ್ಲೆಯ ಹೊರಗಿನವರು. ಉಳಿದ 27 ಮಂದಿ ವಿದ್ಯಾರ್ಥಿಗಳಲ್ಲದವರಲ್ಲಿ 17 ಮಂದಿ ಕಾರ್ಮಿಕರು ಹಾಗೂ 10 ಮಂದಿ ವಿವಿಧ ವೃತ್ತಿಗಳಲ್ಲಿರುವವರು. ಇವರೆಲ್ಲರಿಗೂ ಕೌನ್ಸೆಲಿಂಗ್ ನೀಡಲಾಗುತ್ತಿದ್ದು, ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಇದಲ್ಲದೆ, ಗಾಂಜಾ ಸೇವನೆಯ ಜೊತೆಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂರು ಮಾದಕ ದ್ರವ್ಯ ಮಾರಾಟಗಾರರನ್ನು ವಶಕ್ಕೆ ಪಡೆಯಲಾಗಿದೆ. ಡಿಸೆಂಬರ್ 30ರಂದು ಒಬ್ಬ ಆರೋಪಿಯಿಂದ 50 ಗ್ರಾಂಗಿಂತಲೂ ಹೆಚ್ಚು MDMA ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಂದ ಸುಮಾರು 200 ಗ್ರಾಂ MDMA ಪತ್ತೆಯಾಗಿದೆ. ಮೂವರು ಆರೋಪಿಗಳು ಹಿಂದೆಯೇ ಅಪರಾಧಿ ಹಿನ್ನೆಲೆ ಹೊಂದಿದ್ದು, ಪೊಲೀಸರ ನಿಗಾವಣೆಯಲ್ಲಿದ್ದವರು. ಈ ಬಂಧನಗಳು ಮಾದಕ ದ್ರವ್ಯ ಸರಬರಾಜು ಜಾಲವನ್ನು ಛಿದ್ರಗೊಳಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಮಂಗಳೂರು ಪೊಲೀಸರು ಮಾದಕ ದ್ರವ್ಯ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಸಾರ್ವಜನಿಕರ ಸಹಕಾರದೊಂದಿಗೆ ನಗರವನ್ನು ನಶೆಮುಕ್ತಗೊಳಿಸುವ ಗುರಿ ಹೊಂದಿದ್ದಾರೆ.