ದೆವ್ವ ಹಿಡಿದಿದೆ ಎಂದು ಮಹಿಳೆಗೆ ಬೇವಿನ ಕಟ್ಟಿಗೆಯಲ್ಲಿ ಮನಬಂದಂತೆ ಹೊಡೆದು ಕೊಂದರು! (Video)

ಕಲಬುರಗಿ: ದೆವ್ವ ಹಿಡಿದಿದೆ ಎಂದು ಮಹಿಳೆಗೆ ಬೇವಿನ ಕಟ್ಟಿಗೆಯಲ್ಲಿ ಮನಬಂದಂತೆ ಹೊಡೆದು ಕೊಂದರು!

ಕಲಬುರಗಿ: ದೆವ್ವ ಹಿಡಿದಿದೆ ಎಂದು ಮಹಿಳೆಗೆ ಬೇವಿನ ಕಟ್ಟಿಗೆಯಲ್ಲಿ ಮನಬಂದಂತೆ ಹೊಡೆದು ಕೊಂದರು!

ಕಲಬುರಗಿ
ಮಹಿಳೆಗೆ ದೆವ್ವ ಹಿಡಿದಿದೆ ಎಂದು ಆಕೆಯ ಗಂಡನ ಮನೆಯವರು ದೆವ್ವ ಬಿಡಿಸಲು ಬೇವಿನ ಕಟ್ಟಿಗೆಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದು, ಮಹಿಳೆಯು ಚಿಕಿತ್ಸೆ ಫಲಿಸದೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.
ಆಳಂದ ಪಟ್ಟಣದ ವೇಂಕಟೇಶ್ವರ ನಗರ ಬಡಾವಣೆ ನಿವಾಸಿ ಮುಕ್ತಾಬಾಯಿ (38) ಮೃತರು. 10 ವರ್ಷಗಳ ಹಿಂದೆ ಮಹಾರಾಷ್ಟ್ರದ ಮುರುಮ್ ಗ್ರಾಮದ ಗಿಡ್ಡೆಪ್ಪ ಎಂಬವರ ಜೊತೆ ಇವರ ವಿವಾಹವಾಗಿತ್ತು. ದಂಪತಿಗೆ ಒಬ್ಬ ಮಗನಿದ್ದಾನೆ. ಕಳೆದ ವಾರ ಮುಕ್ತಾಬಾಯಿ ಗಂಡನೊಂದಿಗೆ ಆಳಂದ ಪಟ್ಟಣದ ತಾಯಿ ಮನೆಗೆ ಆಗಮಿಸಿ ಎಳ್ಳಮಾವಾಸ್ಯೆ ಹಬ್ಬ ಆಚರಿಸಿ ವಾಪಸ್ ಗಂಡನ ಮನೆಗೆ ಬಂದಿದ್ದರು.
ಗಂಡನ ಮನೆಗೆ ಹೋದ ಮೇಲೆ ಮುಕ್ತಾಬಾಯಿ ಸುಸ್ತಾಗಿ ಕುಸಿದು ಬಿದ್ದಿದ್ದರು. ಮನೆಯವರು ಮುಕ್ತಬಾಯಿಗೆ ದೆವ್ವ ಹಿಡಿದಿದೆ ಎಂದು ಭಾವಿಸಿ, ಬೇವಿನ ಕಟ್ಟಿಗೆಗಳಿಂದ ಹೊಡೆದಿದ್ದಾರೆ. ಮುಕ್ತಾಬಾಯಿ ಕುಟುಂಬಸ್ಥರಿಗೂ ಕರೆ ಮಾಡಿ ನಿಮ್ಮ ಮಗಳಿಗೆ ದೆವ್ವ ಹಿಡಿದಿದೆ, ಹೀಗಾಗಿ ಬೇವಿನ ಕಟ್ಟಿಗೆಯಿಂದ ಹೊಡೆದು ದೆವ್ವ ಬಿಡಿಸುತ್ತಿದ್ದೇವೆ. ನೀವೂ ಸಹ ಮುರುಮ್ ಗ್ರಾಮಕ್ಕೆ ಬನ್ನಿ ಎಂದು ತಿಳಿಸಿದ್ದಾರೆ.
ಮಗಳಿಗೆ ದೆವ್ವ ಹಿಡಿದಿಲ್ಲ, ನೀವು ಆಕೆಯನ್ನು ಹೊಡೆಯಬೇಡಿ ಎಂದು ಮೃತಳ ತಾಯಿ ತಿಪ್ಪವ್ವ ಆಕೆಯ ಗಂಡನ ಮನೆಯವರಿಗೆ ತಿಳಿ ಹೇಳಿದ್ದಾಳೆ. ಅದಾದ ಬಳಿಕ ಮತ್ತೆ ಮರುದಿನ ಗಂಡ ಮನೆಯಲ್ಲಿ ಇಲ್ಲದಿದ್ದಾಗ ಏಕಾಏಕಿ ಮುಕ್ತಾಬಾಯಿ ಕುಸಿದು ಬಿದ್ದಿದ್ದು, ಈ ವೇಳೆ ಆಕೆಯ ಗಂಡನ ಸಂಬಂಧಿಕರು ಮತ್ತೆ ದೆವ್ವ ಬಂತೆಂದು ಬೇವಿನ ಕಟ್ಟಿಗೆಗಳಿಂದ ಆಕೆಯ ಐದು ವರ್ಷದ ಮಗನೆದುರು ಭೀಕರವಾಗಿ ಹಲ್ಲೆ ಮಾಡಿದ್ದಾರೆ.
video courtesy :TV9 KANNADA
ಅದಾದ ನಂತರ ಕಲಬುರಗಿ ಜಿಲ್ಲೆಯ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಕರೆತಂದು ಸಂಗಮ ನದಿಯಲ್ಲಿ ಸ್ನಾನ‌ ಮಾಡಿಸಿ, ದತ್ತನ ಸನ್ನಿಧಿಯಲ್ಲಿ ಪೂಜೆ ಮಾಡಿಸಿದ್ದಾರೆ. ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಕರೆದೊಯ್ದು ಅಲ್ಲೂ ತೋರಿಸಿದ್ದಾರೆ. ಈ ಬೆಳವಣಿಗೆಗಳಿಂದ ಮುಕ್ತಾಬಾಯಿ ತೀವ್ರವಾಗಿ ಅಸ್ವಸ್ಥರಾಗಿದ್ದರು ಎಂಬ ತಿಳಿದುಬಂದಿದೆ.
ಕೂಡಲೇ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಆದರೆ ಕಟ್ಟಿಗೆಗಳಿಂದ ಹೊಡೆದ ಕಾರಣ ಮುಕ್ತಾಬಾಯಿ ತಲೆಗೆ ತೀವ್ರವಾಗಿ ಪೆಟ್ಟಾದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಜಿಮ್ಸ್ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
"ನನ್ನ ಅಕ್ಕನಿಗೆ ಯಾವ ದೆವ್ವವೂ ಹಿಡಿದಿಲ್ಲ. ಆಕೆಯ ಗಂಡನ ಮನೆಯವರೇ ದೆವ್ವ ಬಂದಿದೆ ಎಂಬ ನಾಟಕವಾಡಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು" ಎಂದು ಮೃತಳ ಸಹೋದರಿ ಶ್ರೀದೇವಿ ಒತ್ತಾಯಿಸಿದ್ದಾರೆ.
ಆಳಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಹಾರಾಷ್ಟ್ರದ ಮುರುಮ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲು ಮುಂದಾಗಿದ್ದಾರೆ.