ಪುತ್ತೂರು: ದೇವಸ್ಥಾನದಲ್ಲಿ ಚಿನ್ನದ ಸರ ಕಳ್ಳತನ – ತಮಿಳುನಾಡು ಮೂಲದ ಮೂರು ಮಹಿಳೆಯರು ಬಂಧನ

 
AI ಚಿತ್ರ



ಪುತ್ತೂರು: ಕೆಮ್ಮಿಂಜೆ ಗ್ರಾಮದ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದ ಹಿರಿಯ ಮಹಿಳೆಯೊಬ್ಬರ ಚಿನ್ನದ ಸರವನ್ನು ಕಳವು ಮಾಡಿದ ಆರೋಪದಡಿ ತಮಿಳುನಾಡು ಮೂಲದ ಮೂರು ಮಹಿಳೆಯರನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ವಿವರ: ಪುತ್ತೂರು ತಾಲೂಕಿನ ಕೆಮ್ಮಿಂಜೆ ನಿವಾಸಿ ಯಮುನಾ (67) ಅವರು ಡಿಸೆಂಬರ್ 26, 2025ರಂದು ಬೆಳಗ್ಗೆ ಸ್ಥಳೀಯ ದೇವಸ್ಥಾನದಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು. ಈ ವೇಳೆ ಅವರು ಸುಮಾರು 14 ಗ್ರಾಂ ತೂಕದ ಚಿನ್ನದ ಸರವನ್ನು ಧರಿಸಿದ್ದರು. ಮಧ್ಯಾಹ್ನ ಊಟ ಮುಗಿಸಿ ಕೈ ತೊಳೆಯಲು ಹೋದ ಸಂದರ್ಭದಲ್ಲಿ ಮುಖಪರಿಚಯವಿಲ್ಲದ ಮೂರು ಅಪರಿಚಿತ ಮಹಿಳೆಯರು ಅವರ ಜೊತೆಗೆ ಬಂದು ನಿಂತಿದ್ದರು.

ಯಮುನಾ ಅವರಿಗೆ ಅರಿವು ಮೂಡುವ ಮೊದಲೇ ಆ ಮಹಿಳೆಯರು ಚಿನ್ನದ ಸರವನ್ನು ಕುತ್ತಿಗೆಯಿಂದ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕಳವಾದ ಸರದ ಅಂದಾಜು ಮೌಲ್ಯ ಸುಮಾರು 60,000 ರೂಪಾಯಿ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಯಮುನಾ ಅವರ ದೂರಿನ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 128/2025ರಡಿ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ತ್ವರಿತ ಕ್ರಮ ಕೈಗೊಂಡು ಅದೇ ದಿನ ರಾತ್ರಿ ಆರೋಪಿಗಳನ್ನು ಪುತ್ತೂರಿನಲ್ಲಿ ವಶಕ್ಕೆ ಪಡೆದಿದ್ದಾರೆ. ಬಂಧಿತರಾದವರು ತಮಿಳುನಾಡು ಮೂಲದ ಮಾರಿ (40), ಶೀತಲ್ ಎಂಬ ಪ್ರೀಯ (25) ಹಾಗೂ ಕಾಳಿಯಮ್ಮ ಎಂಬ ಭಗವತಿ (42) ಎಂದು ಗುರುತಿಸಲಾಗಿದೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ಬಂಧಿತರ ವಿರುದ್ಧ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.