ಮಂಗಳೂರು ನಗರದ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿ ನಾರ್ಲಪದವಿ ರಸ್ತೆಯಲ್ಲಿ ಬೆಳಗಿನ ಸುಮಾರು 10 ಗಂಟೆಗೆ ಒಂದು ಘಟನೆ ನಡೆದಿದೆ. ಅಬ್ದುಲ್ ಸತ್ತಾರ್ ಎಂಬ ವ್ಯಕ್ತಿ ತನ್ನ 11 ವರ್ಷದ ಮಗಳೊಂದಿಗೆ ಬೈಕ್‌ನಲ್ಲಿ ಸುಮಾರು 19 ಕೆಜಿ ಗೋಮಾಂಸವನ್ನು ಸಾಗಿಸುತ್ತಿದ್ದರು ಎಂಬ ಆರೋಪದ ಮೇಲೆ ಇಬ್ಬರು ಯುವಕರು ಅವರನ್ನು ತಡೆದು ನಿಲ್ಲಿಸಿದ್ದಾರೆ.
ಆರೋಪಿಗಳು ಎಡಪದವು ಪ್ರದೇಶದ ಸುಮಿತ್ ಭಂಡಾರಿ (21) ಮತ್ತು ರಜತ್ ನಾಯಕ್ (30). ಇವರು ಟಾಟಾ ಸುಮೋ ವಾಹನದಲ್ಲಿ ಬಂದು ಬೈಕ್ ಅನ್ನು ತಡೆದಿದ್ದು, ಈ ಸಂದರ್ಭದಲ್ಲಿ ಬೈಕ್ ಕೆಳಗೆ ಬಿದ್ದ ಪರಿಣಾಮ ಬಾಲಕಿಯ ಕಾಲಿಗೆ ಸೈಲೆನ್ಸರ್ ಸ್ಪರ್ಶದಿಂದ ಸಣ್ಣ ಸುಟು ಗಾಯವಾಗಿದೆ. ಸತ್ತಾರ್ ಅವರು ಸ್ಥಳದಿಂದ ಓಡಿ ಹೋಗಿದ್ದು, ಸ್ಥಳೀಯರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆಸಿ ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ. ಆರೋಪಿಗಳು ತಾವು ಔಷಧಿ ತೆಗೆದುಕೊಳ್ಳಲು ಅಥವಾ ದೇವಸ್ಥಾನಕ್ಕೆ ಹೋಗುತ್ತಿದ್ದೆವು ಎಂದು ಹೇಳಿದ್ದಾರೆಯಾದರೂ, ಅವರ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಾಲಕಿಯು ಆರೋಪಿಗಳು ತಂದೆಗೆ ಹೊಡೆದಿದ್ದಾರೆ ಎಂದು ಹೇಳಿದ್ದಾಳೆ.
ಗೋಮಾಂಸಕ್ಕೆ ಯಾವುದೇ ದಾಖಲು ಅಥವಾ ಬಿಲ್ ಇರದ ಕಾರಣ ಅಕ್ರಮ ಸಾಗಣೆಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ. ಅಲ್ಲದೆ, ಆರೋಪಿಗಳ ವಿರುದ್ಧ ನೈತಿಕ ಪೊಲೀಸಿಂಗ್ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ. ಸಾಗಿಸುತ್ತಿದ್ದ ಮಾಂಸವು 35 ಪ್ಯಾಕೆಟ್‌ಗಳಲ್ಲಿ ಪ್ಯಾಕ್ ಮಾಡಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಅಕ್ರಮ ಸಾಗಣೆಯನ್ನು ತಡೆಯುವುದು ಪೊಲೀಸರ ಕೆಲಸವೇ ಹೊರತು ವ್ಯಕ್ತಿಗಳು ಸ್ವತಃ ಕಾನೂನು ಜಾರಿಗೊಳಿಸುವಂತಿಲ್ಲ. ಹಲ್ಲೆ ನಡೆದಿದೆಯೇ ಎಂಬುದನ್ನು ಇನ್ನಷ್ಟೆ ದೃಢಪಡಿಸಬೇಕಿದೆ. ತನಿಖೆ ಮುಂದುವರಿದಿದ್ದು, ಸತ್ತಾರ್ ಅವರು ಮಾಂಸವನ್ನು ಎಲ್ಲಿಂದ ತಂದಿದ್ದರು ಎಂಬುದನ್ನು ಕೂಡಾ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.