ಮಹೋಬಾ: ಕೆಲ ವರ್ಷಗಳ ಹಿಂದೆ ಪತ್ನಿ ತೀರಿಕೊಂಡಿದ್ದರು. ಪುತ್ರಿ ಮಾನಸಿಕ ಅಸ್ವಸ್ಥೆ, ಆದ್ದರಿಂದ ಏನು ಮಾಡಬೇಕೆಂದು ತೋಚದ ರೈಲ್ವೆಯ ನಿವೃತ್ತ ಉದ್ಯೋಗಿಯೊಬ್ಬರು ಕೇರ್ ಟೇಕರ್ ಅನ್ನು ನೇಮಿಸಿದ್ದರು. ಆದರೆ ಕೇರ್ ಟೇಕರ್ ಆಗಿ ಬಂದವರು ಆರೈಕೆದಾರರಾಗದೆ ಪ್ರಾಣವನ್ನೇ ಹಿಂಡುವ ಹಂತಕರಾಗಿದ್ದರು.
ಸುಮಾರು ಐದು ವರ್ಷಗಳ ಕಾಲ ಕೇರ್ ಟೇಕರ್ ತಂದೆ - ಮಗಳನ್ನು ಬಂಧಿಸಿ ಚಿತ್ರಹಿಂಸೆ ನೀಡಿದ್ದರು. ಆದ್ದರಿಂದ ನಿವೃತ್ತ ರೈಲ್ವೇ ಉದ್ಯೋಗಿ ಓಂಪ್ರಕಾಶ್ ಸಿಂಗ್ ರಾಥೋಡ್ (70) ಸಾವನ್ನಪ್ಪಿದ್ದಾರೆ. ಅವರ ಪುತ್ರಿಯ ಸ್ಥಿತಿ ಚಿಂತಾಜನಕವಾಗಿದೆ. ಆಕೆಯ ದೇಹದಲ್ಲಿ ಒಂದಿಷ್ಟು ಮಾಂಸವೂ ಇಲ್ಲದೆ ನಿತ್ರಾಣಳಾಗಿದ್ದಾಳೆ.
ಭಾರತೀಯ ರೈಲ್ವೆಯಲ್ಲಿ ಮಾಜಿ ಹಿರಿಯ ಗುಮಾಸ್ತರಾಗಿದ್ದ ಓಂಪ್ರಕಾಶ್ ಸಿಂಗ್ ರಾಥೋಡ್ ಅವರ ಪತ್ನಿ 2016 ರಲ್ಲಿ ನಿಧನರಾಗಿದ್ದರು. ಆದ್ದರಿಂದ ಓಂಪ್ರಕಾಶ್ ಮಾನಸಿಕ ಅಸ್ವಸ್ಥೆಯಾಗಿದ್ದ 27 ವರ್ಷದ ಪುತ್ರಿ ರಶ್ಮಿಯೊಂದಿಗೆ ಪ್ರತ್ಯೇಕ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದರು. ಮನೆಯನ್ನು ನಿರ್ವಹಿಸಲು, ಕುಟುಂಬವು ರಾಮ್ ಪ್ರಕಾಶ್ ಕುಶ್ವಾಹ ಮತ್ತು ಆತನ ಪತ್ನಿ ರಾಮದೇವಿ ಎಂಬ ದಂಪತಿಯನ್ನು ಆರೈಕೆದಾರರನ್ನಾಗಿ ನೇಮಿಸಿಕೊಂಡಿದ್ದರು.
ಇವರು ಮನೆಯ ಉಸ್ತುವಾರಿ ಸೇರಿ ಕ್ರಮೇಣ ಮನೆಯ ಸಂಪೂರ್ಣ ನಿಯಂತ್ರಣವನ್ನು ಪಡೆದರು. ಆ ದಂಪತಿ ಓಂಪ್ರಕಾಶ್ ಮತ್ತು ರಶ್ಮಿ ಅವರನ್ನು ನೆಲ ಮಹಡಿಯ ಕೋಣೆಗಳಲ್ಲಿ ಬಂಧಿಸಿ, ಮೇಲಿನ ಭಾಗವನ್ನು ತಾವೇ ಆಕ್ರಮಿಸಿಕೊಂಡು ಆರಾಮವಾಗಿ ವಾಸಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಓಂಪ್ರಕಾಶ್ ಸಾವಿನ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದ ದೊರೆತ ಬಳಿಕ ಸೋಮವಾರದಿಂದ ಈ ದೌರ್ಜನ್ಯ ಬೆಳಕಿಗೆ ಬಂದಿತು. ಸಂಬಂಧಿಕರು ಮನೆಗೆ ತಲುಪಿದಾಗ, ಅವರಿಗೆ ಆತಂಕಕಾರಿ ದೃಶ್ಯ ಕಂಡು ಬಂದಿದೆ. ಓಂಪ್ರಕಾಶ್ ಅವರ ದೇಹವು ಅತ್ಯಂತ ದುರ್ಬಲವಾಗಿದ್ದು, ದೀರ್ಘಕಾಲದ ನಿರ್ಲಕ್ಷ್ಯದ ಲಕ್ಷಣಗಳನ್ನು ತೋರಿಸುತ್ತಿದೆ ಎಂದು ವಿವರಿಸಲಾಗಿದೆ. ರಶ್ಮಿ ಕತ್ತಲೆಯ ಕೋಣೆಯಲ್ಲಿ ಬೆತ್ತಲೆಯಾಗಿ, ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಹಸಿವಿನಿಂದಾಗಿ ರಶ್ಮಿ ಅಸ್ಥಿಪಂಜರದ ಸ್ಥಿತಿಗೆ ತಲುಪಿದ್ದಾಳೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಆಕೆಯ ದೇಹದಲ್ಲಿ ಯಾವುದೇ ಮಾಂಸ ಉಳಿದಿರಲಿಲ್ಲ ಕೇವಲ ಒಂದು ಅಸ್ಥಿಪಂಜರದ ಚೌಕಟ್ಟು ಮಾತ್ರ ಉಳಿದಿತ್ತು. ಓಂಪ್ರಕಾಶ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಈ ಘಟನೆಯಿಂದ ತಾವು ದಿಗ್ಭ್ರಮೆಗೊಂಡಿದ್ದೇವೆ ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ. ಓಂಪ್ರಕಾಶ್ ಅವರನ್ನು ಒಳ್ಳೆಯ ವ್ಯಕ್ತಿ ಎಂದು ನೆನಪಿಸಿಕೊಳ್ಳುತ್ತಾರೆ. ರಶ್ಮಿ ಈಗ ಕುಟುಂಬ ಸದಸ್ಯರ ಆರೈಕೆಯಲ್ಲಿದ್ದಾರೆ, ಅವರು ಇದಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.