ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ
ಮೂಡುಬಿದಿರೆ: ನೋವಿಗೆ ಸ್ಪಂದಿಸುವುದೇ ನಿಜವಾದ ಧರ್ಮ. ಅಂಧಕಾರ, ಅಸ್ಪೃಶ್ಯತೆ, ಮಾನವ ಬಲಿ, ವರದಕ್ಷಿಣೆ ಮೊದಲಾದ ಅಮಾನವೀಯ ಆಚರಣೆಗಳಿಂದ ಜನರನ್ನು ರಕ್ಷಿಸಿದ ಯೇಸು ನಡೆದ ದಾರಿಯೇ ಮಾನವ ಧರ್ಮ ಎಂದು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನಾ ನುಡಿದರು.
ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೃಷಿಸಿರಿಯ ಮುಂಡ್ರೆದೆಗುತ್ತು ಕೆ ಅಮರನಾಥ್ ಶೆಟ್ಟಿ ಸಭಾಂಗಣದಲ್ಲಿ ನಡೆದ ಆಳ್ವಾಸ್ ಕ್ರಿಸ್ಮಸ್-2025 ಸಂಭ್ರಮಾಚರಣೆಯಲ್ಲಿ ಮಾತನಾಡಿದರು.
ಹಸಿದವರಿಗೆ ಆಹಾರ, ದಣಿದವರಿಗೆ ನೀರು, ತೊಡಲು ವಸ್ತ್ರ ಒದಗಿಸುವುದೇ ಮಾನವ ಧರ್ಮ. ಪ್ರೀತಿ, ಸೇವೆ ಮತ್ತು ಕರುಣೆಯಿಂದ ಜಗತ್ತಿಗೆ ಬೆಳಕು ತೋರಿದವರು ಯೇಸು. ಎಲ್ಲಾ ಧರ್ಮಗಳಲ್ಲೂ ಪ್ರೀತಿ ಮತ್ತು ನೀತಿ ಅಡಗಿದ್ದು, ಯಾವ ಧರ್ಮವೂ ಇದಕ್ಕೆ ಹೊರತಲ್ಲ ಎಂಬ ಸತ್ಯವ ಜಗತ್ತಿಗೆ ಸಾರಿದವರು, ಅಹಂಕಾರ ಮತ್ತು ದ್ವೇಷವನ್ನು ತೊರೆದು ಒಳ್ಳೆಯದನ್ನೇ ಬಯಸುವ ಬದುಕು ಮಾನವೀಯತೆಗೆ ದಾರಿ ಎಂದು ತಿಳಿಸಿದ ದೇವಮಾನವರವರು ಎಂದರು.
ಅಟಲ್ ಬಿಹಾರಿ ವಾಜಪೇಯಿ ಅವರು ಕ್ರೈಸ್ತ ಧರ್ಮದ ಸೇವೆ, ತ್ಯಾಗ ಮತ್ತು ಕ್ಷಮೆಯ ಮೌಲ್ಯಗಳನ್ನು ಗೌರವಿಸಿದ್ದರೆ, ಮಹಾತ್ಮ ಗಾಂಧೀಜಿ ಯೇಸುವಿನ ಅಹಿಂಸೆ ಹಾಗೂ ಮಾನವೀಯತೆಯನ್ನು ಅನುಸರಿಸಿದ್ದರು ಎಂದರು.
ಈ ಸಂದರ್ಭದಲ್ಲಿ ಮಂಗಳೂರಿನ ಸೇಂಟ್ ಜೂಜ್ ವಾಜ್ ಹೋಮ್‌ನ ನಿವೃತ್ತ ಹಿರಿಯ ಧರ್ಮಗುರು ವಂದನೀಯ ಫ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್ ಅವರನ್ನು ಹಾರ, ಶಾಲು, ಸ್ಮರಣಿಕೆ ಹಾಗೂ ಪ್ರಮಾಣಪತ್ರದ ಮೂಲಕ ಆಳ್ವಾಸ್ ಕ್ರಿಸ್ಮಸ್ ಸಂದರ್ಭ ದಲ್ಲಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ ಬೆಳೆಸುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕಾರ್ಯವನ್ನು ಶ್ಲಾಘಿಸಿದರು. ಜ್ಞಾನ ಗಳಿಸುವುದರ ಜೊತೆಗೆ ಉತ್ತಮ ಸಮಾಜಮುಖಿ ವ್ಯಕ್ತಿಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಡಾ ಮೋಹನ ಆಳ್ವರ ಒಡನಾಡಿಯಾಗಿದ್ದ ಅವರು, ಆಳ್ವರು ಇಂದಿನ ಏಳಿಗೆಯನ್ನು ಮನಸಾರೆ ಕೊಂಡಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಎಲ್ಲ ಧರ್ಮಗಳ ಹಬ್ಬಗಳನ್ನು ಸಮಾನ ಗೌರವದಿಂದ ಆಚರಿಸುವ ಮೂಲಕ ಆಳ್ವಾಸ್ ನಿಜವಾದ ಅರ್ಥದಲ್ಲಿ “ಮಿನಿ ಇಂಡಿಯಾ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಬ್ಬಗಳ ಆಚರಣೆ ಕೇವಲ ಸಾಂಪ್ರದಾಯಿಕ ಕಾರ್ಯಕ್ರಮಗಳಾಗಿರದೆ, ವಿದ್ಯಾರ್ಥಿಗಳಲ್ಲಿ ಪರಸ್ಪರ ಗೌರವ, ಸಹಬಾಳ್ವೆ ಮತ್ತು ಸೌಹಾರ್ದತೆಯನ್ನು ಬೆಳೆಸುವ ಶೈಕ್ಷಣಿಕ ವೇದಿಕೆಯಾಗಿ ರೂಪುಗೊಂಡಿದೆ. ವಿಭಿನ್ನ ಧರ್ಮಗಳ ವಿದ್ಯಾರ್ಥಿಗಳು ಒಟ್ಟಾಗಿ ಭಾಗವಹಿಸಿ, ಪರಸ್ಪರ ಸಂಸ್ಕೃತಿಗಳನ್ನು ಅರಿಯುವ ಅವಕಾಶವನ್ನು ಆಳ್ವಾಸ್ ನೀಡುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸಂಕುಚಿತ ಮನೋಭಾವದ ಬದಲು ವಿಶಾಲ ಚಿಂತನೆ ಬೆಳೆಯುತ್ತದೆ ಎಂದರು.
ಗೋದಲಿಯಲ್ಲಿ ಬಾಲ ಯೇಸುವಿನ ಜನನದ ದರ್ಶನ, ವಿದ್ಯಾರ್ಥಿಗಳಿಂದ ಕ್ಯಾರೆಲ್ ಗಾಯನ, ಸಂತ ಕ್ಲಾಸ್‌ನ ಆಗಮನ, ವಿದ್ಯುದ್ದೀಪಾಲಂಕಾರದಿAದ ಕಂಗೊಳಿಸಿದ ಕ್ರಿಸ್‌ಮಸ್ ಮರ ಹಾಗೂ ಸಭಾಂಗಣ—ಇವೆಲ್ಲವೂ ಸೇರಿ ಕೃಷಿ ಸಿರಿ ವೇದಿಕೆಯಲ್ಲಿ ಶುಕ್ರವಾರ ಸಂಜೆ ನಡೆದ ‘ಆಳ್ವಾಸ್ ಕ್ರಿಸ್‌ಮಸ್’ ಸಂಭ್ರಮಾಚರಣೆಗೆ ಹಬ್ಬದ ಸೊಬಗನ್ನು ಇನ್ನಷ್ಟು ಹೆಚ್ಚಿಸಿತು.
ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ತುಳು, ಕನ್ನಡ, ಕೊಂಕಣಿ, ಮಲಯಾಳಂ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಕ್ಯಾರೆಲ್ ಹಾಡಿದರು. ಏಂಜೆಲ್ಸ್ ಮತ್ತು ಸಂತ ಕ್ಲಾಸ್ ವೇಷಧಾರಿಗಳಾಗಿ ವಿದ್ಯಾರ್ಥಿಗಳು ಸಂಭ್ರಮ ಹೆಚ್ಚಿಸಿದರು. ಗಿರಿಧರ್ ತಂಡದ ಸದಸ್ಯರು ಗಾಯನ ನಡೆಸಿಕೊಟ್ಟರು. ಆಳ್ವಾಸ್ ಹೋಮಿಯೋಪಥಿ ಕಾಲೇಜಿನ ಪ್ರಾಂಶುಪಾಲ ರೋಷನ್ ಪಿಂಟೊ ಸ್ವಾಗತಿಸಿದರು. ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಅಲಂಗಾರಿನ ಹೋಲಿ ರೋಸರಿ ಚರ್ಚನ ಮುಖ್ಯ ಧರ್ಮಗುರು ಫಾ. ಮೆಲ್ವಿನ್ ನರೋನಾ ಪ್ರಾರ್ಥಿಸಿದರು. ರಂಗ್ ತರಂಗ್ ತಂಡದಿAದ ಸಾಂಸ್ಕೃತಿಕ ಕರ‍್ಯಕ್ರಮ ಜರುಗಿತು. ಆಳ್ವಾಸ್ ಕ್ರಿಸ್ಮಸ್ ಹಿನ್ನಲೆಯಲ್ಲಿ ಆಯೋಜಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
