ಡಿ.30ರಂದು ಮಂಗಳೂರಿನ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಂಭ್ರಮ: 22 ಸಾವಿರ ತುಳಸಿ ಗಿಡಗಳ ವಿತರಣೆ

 

ಡಿ.30ರಂದು ಮಂಗಳೂರಿನ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಂಭ್ರಮ: 22 ಸಾವಿರ ತುಳಸಿ ಗಿಡಗಳ ವಿತರಣೆ

ಮಂಗಳೂರು: ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಧನುರ್ಮಾಸದ ವೈಕುಂಠ ಏಕಾದಶಿಯನ್ನು ಡಿಸೆಂಬರ್ 30ರಂದು ಭಕ್ತಿಪೂರ್ವಕವಾಗಿ ಆಚರಿಸಲಾಗುವುದು. ಪ್ರಸಾದ ರೂಪವಾಗಿ ಪ್ರತಿ ಮನೆಗೆ ಒಂದರಂತೆ 22 ಸಾವಿರ ತುಳಸಿ ಗಿಡಗಳನ್ನು ವಿತರಿಸಲಾಗುವುದು ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಗಣೇಶ್ ನಾಗ್ವೇಕರ್ ತಿಳಿಸಿದ್ದಾರೆ.

ದೇವಸ್ಥಾನದ ಪ್ರಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೈಕಾದಶ್ಯಾಃ ಪರಂ ವೃತಂ’ ಎಂಬ ಪುರಾಣ ವಚನದಂತೆ ಏಕಾದಶೀ ವ್ರತವೇ ಶ್ರೇಷ್ಠವೆಂದು ಶಾಸ್ತ್ರಗಳು ಹೇಳುತ್ತವೆ. ಈ ದಿನ ವೈಕುಂಠದ್ವಾರ ತೆರೆದಿರುತ್ತದೆ ಎಂಬ ಭಕ್ತರ ನಂಬಿಕೆ ಇದೆ. ವೈಕುಂಠ ಏಕಾದಶೀ ದಿನ ಶ್ರೀ ವೆಂಕಟೇಶ್ವರ ಅಥವಾ ಶ್ರೀ ವಿಷ್ಣು ದೇವರ ದರ್ಶನ ಮಾಡಿದರೆ ಸ್ವರ್ಗಪ್ರಾಪ್ತಿ ಹಾಗೂ ಆತ್ಮಿಕ ಶಾಂತಿ ದೊರೆಯುತ್ತದೆ ಎಂಬ ಪ್ರತೀತಿ ಇದೆ ಎಂದರು.

ಪವಿತ್ರ ಪರ್ವಕಾಲದ ವಿಶೇಷ ಕಾರ್ಯಕ್ರಮಗಳು

ಈ ಪವಿತ್ರ ಪರ್ವಕಾಲದಲ್ಲಿ ಲೋಕಕಲ್ಯಾಣ ಹಾಗೂ ಚೈತನ್ಯಾಭಿವೃದ್ಧಿಯ ಸಂಕಲ್ಪದೊಂದಿಗೆ ಶ್ರೀ ದೇವರ ಸಾನ್ನಿಧ್ಯದಲ್ಲಿ ನಾಮತ್ರಯ ಮಹಾಮಂತ್ರ ಜಪಯಜ್ಞ, ಪ್ರಶ್ನೆಯಾಗ, ಅಷ್ಟಾವಧಾನ ಸೇವೆಗಳನ್ನು ಶ್ರೀ ದೇವರ ಪ್ರೇರಣೆಯಂತೆ ಹಾಗೂ ಶ್ರೀ ಗುರುಗಳ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿದೆ. ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ದರ್ಶನ ಹಾಗೂ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕೆಂದು ವಿನಂತಿಸಿದರು.

ವಿಶೇಷ ಕಾರ್ಯಕ್ರಮ: ಡಿ.30ರಂದು ಸಂಜೆ 4 ಗಂಟೆಗೆ ಡೊಂಗರಕೇರಿ ಕಟ್ಟೆಯಿಂದ ಪುಷ್ಪಯಾಗದ ಹೂವಿನ ವಿಶೇಷ ಮೆರವಣಿಗೆ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಎಲ್ಲ ಭಕ್ತರೂ ಭಾಗವಹಿಸುವಂತೆ ಕೋರಲಾಗಿದೆ.

ದಿನದ ಪೂಜಾ ಕಾರ್ಯಕ್ರಮಗಳ ವಿವರ

ಪ್ರಾತಃಕಾಲ 5.30ಕ್ಕೆ – ಸುಪ್ರಭಾತ ಸೇವೆ
6.00ಕ್ಕೆ – ಸಾಮೂಹಿಕ ಪ್ರಾರ್ಥನೆ, ಅಷ್ಟಾಕ್ಷರೀ ಮಂತ್ರ ಜಪ, ಪ್ರಾತಃ ಪೂಜೆ
7.00ರಿಂದ 8.00ರವರೆಗೆ – ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ
8.00ರಿಂದ 10.00ರವರೆಗೆ – ನಾಮತ್ರಯ ಮಹಾಮಂತ್ರ ಜಪಯಜ್ಞ
ಮಧ್ಯಾಹ್ನ 12.00ಕ್ಕೆ – ಮಹಾಪೂಜೆ
1.00ರಿಂದ 3.00ರವರೆಗೆ – ಭಜನಾ ಕಾರ್ಯಕ್ರಮ
3.00ರಿಂದ 4.00ರವರೆಗೆ – ವೈದಿಕರಿಂದ ವೇದ ಪಾರಾಯಣ
ಸಂಜೆ 4.00ರಿಂದ – ಪುಷ್ಪಯಾಗ ಆರಂಭ, ಅಷ್ಟಾವಧಾನ ಸೇವೆ
ರಾತ್ರಿ 9.00ಕ್ಕೆ – ದೀಪಾರಾಧನೆ, ಮಹಾಪೂಜೆ
10.00ಕ್ಕೆ – ಶ್ರೀ ವಿಠೋಭ ದೇವರ ಸನ್ನಿಧಿಯಲ್ಲಿ ಪೂಜೆ ಹಾಗೂ ಪ್ರಸಾದ ವಿತರಣೆ

ಸುದ್ದಿಗೋಷ್ಠಿಯಲ್ಲಿ ಪ್ರವೀಣ್ ಶೇಠ್ ನಾಗ್ವೇಕರ್, ವಿನಾಯಕ ಕೃಷ್ಣ ಶೇಠ್ ಹಾಗೂ ಬಿ. ಸಾಯಿದತ್ ನಾಯಕ್ ಉಪಸ್ಥಿತರಿದ್ದರು.

ಮೂಲಗಳು

.

Disclosure: