3ಕೋಟಿ ರೂ. ವಿಮಾ ಹಣಕ್ಕಾಗಿ ಹೆತ್ತ ಅಪ್ಪನನ್ನೇ ಹಾವಿನಿಂದ ಕಚ್ಚಿಸಿ ಕೊಲೆಗೈದ ಪುತ್ರರು



ತಿರುವಳ್ಳೂರು: ಸುಮಾರು 3 ಕೋಟಿ ರೂ. ವಿಮಾ ಹಣವನ್ನು ಲಪಟಾಯಿಸಲು ಹೆತ್ತ ಅಪ್ಪನನ್ನೇ ಹಾವಿನಿಂದ ಕಚ್ಚಿಸಿ ಕೊಲೆಗೈದ ಆಘಾತಕಾರಿ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೃತರ ಇಬ್ಬರು ಪುತ್ರರು ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಿದ್ದಾರೆ.

ಪೊತ್ತತ್ತೂರುಪೆಟ್ಟೆ ನಿವಾಸಿ, ಸರ್ಕಾರಿ ಶಾಲೆಯ ಪ್ರಯೋಗಾಲಯ ಸಹಾಯಕ ಗಣೇಶ್ (56) ಕೊಲೆಯಾದ ದುರ್ದೈವಿ. ಅಕ್ಟೋಬರ್ 22ರಂದು ಗಣೇಶ್ ತಮ್ಮ ಮನೆಯಲ್ಲಿ ನಿದ್ರಿಸುತ್ತಿದ್ದರು. ಈ ವೇಳೆ ಅವರು ಕತ್ತಿಗೆ ಹಾವು ಕಚ್ಚಿ ಸಾವನ್ನಪ್ಪಿದ್ದರು. ಮೇಲ್ನೋಟಕ್ಕೆ ಇದು ಆಕಸ್ಮಿಕ ಸಾವು ಎಂದು ಭಾವಿಸಲಾಗಿತ್ತು. ಆದರೆ, ಗಣೇಶ್ ಅವರ ಹೆಸರಿನಲ್ಲಿ ಬರೋಬ್ಬರಿ 11ವಿಮಾ ಪಾಲಿಸಿಗಳು ಇದ್ದು, ಹಾಗಾಗಿ ಅವರ ಸಾವಿನ ಬಗ್ಗೆ ವಿಮಾ ಕಂಪನಿಗಳು ಅನುಮಾನ ವ್ಯಕ್ತಪಡಿಸಿದೆ. ಇದರಿಂದಾಗಿ ಅಸಲಿ ಸತ್ಯ ಹೊರಬಂದಿದೆ.

ಪೊಲೀಸ್‌ ತನಿಖೆಯ ವೇಳೆ ಗಣೇಶ್ ಅವರ ಮರಣಕ್ಕೂ ಕೆಲವು ವಾರಗಳ ಮೊದಲು ಅವರು ಅಪಘಾತಕ್ಕೊಳಗಾಗಿದ್ದ ವಿಷಯ ತಿಳಿದುಬಂದಿದೆ. ಇದರಿಂದ ಅನುಮಾನಗೊಂಡ ಪೊಲೀಸರು ದಾಖಲೆಗಳು ಮತ್ತು ದೂರವಾಣಿ ಕರೆಗಳನ್ನು ಪರಿಶೀಲಿಸಿದ್ದಾರೆ‌. ಈ ವೇಳೆ ಗಣೇಶ್ ಅವರ ಪುತ್ರರು ಹಾವನ್ನು ನೀಡಿದ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿರುವುದು ದೃಢಪಟ್ಟಿದೆ. ಆರೋಪಿಗಳು ವ್ಯವಸ್ಥಿತವಾಗಿ ಹಾವನ್ನು ತಂದು, ತಂದೆ ಗಾಢ ನಿದ್ರೆಯಲ್ಲಿದ್ದಾಗ ಕಚ್ಚಿಸಿ ಮರಣವನ್ನು ಆಕಸ್ಮಿಕ ಎಂದು ಬಿಂಬಿಸಲು ಸಂಚು ರೂಪಿಸಿದ್ದರು.

ಸುಮಾರು 3 ಕೋಟಿ ರೂಪಾಯಿ ವಿಮಾ ಮೊತ್ತವನ್ನು ಪಡೆಯುವ ದುರಾಸೆಯಿಂದ ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸದ್ಯ ಗಣೇಶ್ ಅವರ ಇಬ್ಬರು ಪುತ್ರರು ಹಾಗೂ ಅವರಿಗೆ ಸಹಕರಿಸಿದ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ತನಿಖೆ ಮುಂದುವರಿಸಿದ್ದಾರೆ. ಹಣದ ಆಸೆಗೆ ಹೆತ್ತವರನ್ನೇ ಬಲಿ ಪಡೆದ ಈ ಘಟನೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.