ಮಿಸೆಸ್ ಇಂಡಿಯಾ -2025 ಕಿರೀಟ ಮುಡಿಗೇರಿಸಿದ ಕನ್ನಡತಿ ಡಾ. ರಶ್ಮಾ ಎಂ. ಶೆಟ್ಟಿ

 



ಮಂಗಳೂರು : ಮುಲುಂಡ್‌ನ ಪ್ರಕೃತಿ ಚಿಕಿತ್ಸಕಿ ವೈದ್ಯೆ ಡಾ. ರಶ್ಮಾ ಮೋಹಿತ್ ಶೆಟ್ಟಿ ಅವರು ಡಿ. 18 ರಿಂದ ಡಿ 21 ವರಗೆ ನಡೆದ ಜೈಪುರದ ಜೈಬಾಗ್ ಪ್ಯಾಲೇಸ್‌ನಲ್ಲಿ ದೀಪಾಳಿ ಫಡ್ನಿಸ್ (ನ್ಯಾಷನಲ್ ಡೈರೆಕ್ಟರ್, ಮಿಸೆಸ್ ಇಂಡಿಯಾ) ಅವರ ಆಯೋಜನೆಯಲ್ಲಿ ನಡೆದ ಭವ್ಯ ಅಂತಿಮ ಸ್ಪರ್ಧೆಯಲ್ಲಿ ಮಿಸೆಸ್ ಇಂಡಿಯಾ – ಸೀಸನ್ 15 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

 ಮಿಸೆಸ್ ಇಂಡಿಯಾ ಭಾರತದಲ್ಲಿನ ಅತ್ಯಂತ ಪ್ರತಿಷ್ಠಿತ ಹಾಗೂ ದೀರ್ಘಕಾಲದಿಂದ ನಡೆದ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದಾಗಿದೆ. ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ 40 ಅಂತಿಮ ಸ್ಪರ್ಧಿಗಳು ಭಾಗವಹಿಸಿದ್ದ ಈ ನಾಲ್ಕು ದಿನಗಳ ಸ್ಪರ್ಧೆಯಲ್ಲಿ ಪ್ರತಿಭಾ ಸುತ್ತು, ಪ್ರೇರಣಾದಾಯಕ ಜೀವನ ಕಥೆ, ವೈಯಕ್ತಿಕ ಸಂದರ್ಶನ, ರ‍್ಯಾಂಪ್  ವಾಕ್, ರಾಷ್ಟ್ರೀಯ ವೇಷಭೂಷಣ, ಸಾಂಪ್ರದಾಯಿಕ ಸುತ್ತು ಹಾಗೂ ಈವಿನಿಂಗ್ ಗೌನ್ ಸುತ್ತುಗಳ ಮೂಲಕ ಸ್ಪರ್ಧಿಗಳನ್ನು ಮೌಲ್ಯಮಾಪನ ಮಾಡಲಾಯಿತು.

ರಾಷ್ಟ್ರಮಟ್ಟದ ವೇದಿಕೆಯಲ್ಲಿ ಡಾ. ರಶ್ಮಾ ಮೋಹಿತ್ ಶೆಟ್ಟಿ ಅವರು ತೋರಿದ ಆತ್ಮವಿಶ್ವಾಸ, ಸಮರ್ಪಣೆ ಮತ್ತು ಸರ್ವತೋಮುಖ ಶ್ರೇಷ್ಠತೆ ಈ ಗೌರವಕ್ಕೆ ಕಾರಣವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.


  ಮಿಸೆಸ್ ಇಂಡಿಯಾ ಕರ್ನಾಟಕ 2024 ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್ ಪ್ರಶಸ್ತಿಯನ್ನು ಗಳಿಸಿದ್ದಾರೆ.  ಈ ಸ್ಪರ್ಧೆಯಲ್ಲಿ  ಟ್ಯಾಲೆಂಟ್‌ ರೌಂಡ್ ನಲ್ಲಿ ಉತ್ತಮ ಪ್ರದರ್ಶನ ಬಹುಮಾನ , ರ‍್ಯಾಂಪ್ ವಾಕ್ ಸ್ಪರ್ಧೆಯಲ್ಲಿ ಅತ್ಯುತ್ತಮ ನಡೆ ಬಹುಮಾನ, ಉತ್ತಮ ಟಾಸ್ಕ್ (ಶಾರ್ಟ್ ಫಿಲ್ಮ್) ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದೆ.


ಮೇ 19, ರಂದು ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ನಡೆದ ಪ್ರತಿಷ್ಠಿತ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್ ಪ್ರಶಸ್ತಿ ಹಾಗೂ ಬಂಟರ ಸಂಘ ಮುಂಬಯಿ ಯುವ ವಿಭಾಗ ಆಯೋಜಿಸಿದ ಆಕಾಂಕ್ಷ ಮಿಸೆಸ್ ಬಂಟ್ಸ್ 2023 ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್ ಪ್ರಶಸ್ತಿಯನ್ನು ಗಳಿಸಿದ್ದಾರೆ. 

ನಾರ್ಯಗುತ್ತು ರಘುನಾಥ ಶೆಟ್ಟಿ ಮತ್ತು ಅಮ್ಟೂರು ಬಾಳಿಕೆ ಕಸ್ತೂರಿ ಶೆಟ್ಟಿ ದಂಪತಿಯ ಸುಪುತ್ರಿ, ಡಾ.ರಶ್ಮಾ ಎಂ.ಶೆಟ್ಟಿ ಯವರು ಮೋಹಿತ್ ಶೆಟ್ಟಿಯವರ ಪತ್ನಿ ಇವರಿಗೆ 7 ವರ್ಷದ ಮಗಳು ನೇಸರ. ಇವರು  ಕಟಪಾಡಿ ಮೂಡು ಬೆಟ್ಟು ಹೊಸಮನೆ ಮನೋಹರ್ ಶೆಟ್ಟಿ (ಐನಾಕ್ ಅಪ್ಟಿಕ್ಸ್) ಮತ್ತು ಮುಚ್ಚೂರು ಬರ್ಕೆ ದಿ. ಮಮತಾ ಶೆಟ್ಟಿ (ಮಾಜಿ ಅಧ್ಯಕ್ಷೆ ಮುಲುಂಡ್ ಬಂಟ್ಸ್ ಮಹಿಳಾ ವಿಭಾಗ) ಅವರ ಸೊಸೆ. ಪುತ್ತೂರಿನ ಮುಂಡೂರು ಗ್ರಾಮದ ಪೊನೋನಿಯದಲ್ಲಿ ಬೆಳೆದ ಇವರು ಪ್ರಸ್ತುತ ಮುಂಬೈನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವರು.




ಇವರು ವೈದ್ಯಕೀಯ ಸೇವೆಯೊಂದಿಗೆ, ಗೃಹಿಣಿಯಾಗಿ ಜೊತೆಗೆ, ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ಮುಲುಂಡ್ ಹಿಲ್ಸ್ ಇನ್ನರ್ ವೀಲ್ ಕ್ಲಬ್‌ನ ಸಮಿತಿಯ ಕಾರ್ಯದರ್ಶಿಯಾಗಿ, ಮಹಿಳೆಯರ ಆರೋಗ್ಯ ಮತ್ತು ಜೀವನಶೈಲಿಯ ಅಸ್ವಸ್ಥತೆಗಳ ಕುರಿತು ಅನೇಕ ಲೈವ್ ಸೆಮಿನಾರ್‌ಗಳನ್ನು ನಡೆಸಿದ್ದಾರೆ. ನವಿ ಮುಂಬಯಿಯ ಡಾ. ಡಿವೈ ಪಾಟೀಲ್ ಪ್ರಕೃತಿ ಚಿಕಿತ್ಸೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ  ಸೇವೆ ಸಲ್ಲಿಸುತ್ತಿದ್ದಾರೆ.

ಡಾ.ರಶ್ಮಾ ಎಂ. ಶೆಟ್ಟಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ಪಾಪೆಮಜಲು ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿದ್ದು, ನಂತರ ಪುತ್ತೂರು ಕೊಂಬೆಟ್ಟು ಸರ್ಕಾರಿ ಕಾಲೇಜಿನಲ್ಲಿ ಪ್ರಿ-ಯುನಿವರ್ಸಿಟಿ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಅವರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪ್ರಕೃತಿ ಚಿಕಿತ್ಸೆ  ಪದವಿಯನ್ನು ಪಡೆದು, ರಾಜೀವ್‌ ಗಾಂಧಿ ವಿಶ್ವವಿದ್ಯಾಲಯದಲ್ಲಿ ಎರಡನೇ ಸ್ಥಾನ ಪಡೆದರು ಮತ್ತು ತಮ್ಮ ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿಯಾಗಿ ಘೋಷಿಸಲ್ಪಟ್ಟ ಇವರು ರಾಜ್ಯಮಟ್ಟದ ಅಥ್ಲೆಟಿಕ್ ಮತ್ತು ಥ್ರೋಬಾಲ್ ಆಟಗಾರ್ತಿಯೂ ಆಗಿದ್ದು,   ಮುಲುಂಡ್ ಬಂಟ್ಸ್‌ ಮಹಿಳಾ ವಿಭಾಗದ ಸದಸ್ಯೆಯಾಗಿ ,  ದಿನಾಂಕ 8-6-2024 ರಂದು ಮುಂಬಯಿ ಬಂಟರ ಭವನ ಕುರ್ಲಾ ದಲ್ಲಿ ನಡೆದ  ಕರ್ನಾಟಕ ಸಂಘ ಅಂಧೇರಿ (ರಿ) ಹಾಗೂ ಕನ್ನಡ ಕಲಾ ಕೇಂದ್ರ, ಮುಂಬಯಿ ಸಹಯೋಗ ಹಾಗೂ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಸಹಕಾರದಿಂದ ಆಯೋಜಿಸಿದ ರಾಜ್ಯ ಮಟ್ಟದ "ಡಾ! ಶಿವರಾಮ ಕಾರಂತ ನಾಟಕೋತ್ಸವ -2024  ಸ್ಪರ್ಧೆಯಲ್ಲಿ

 ಕಲಾ ಸ್ಪಂದನ ಮುಂಬಯಿ ತಂಡ ಪ್ರಸ್ತುತ ಪಡಿಸಿದ ಬಾಬಾ ಪ್ರಸಾದ್ ಅರಸ  ನಿರ್ದೇಶನದ "ಸ್ವಾಮಿ ಕೊರಗಜ್ಜ " ನಾಟಕದಲ್ಲಿ ಅತ್ಯುತ್ತಮ ನಟಿ ಪ್ರಥಮ ಪ್ರಶಸ್ತಿಯನ್ನು ಡಾ.  ರಶ್ಮಾ ಶೆಟ್ಟಿ ಪಡೆದಿರುತ್ತಾರೆ.