ಸುರತ್ಕಲ್ ನಲ್ಲಿ "ಪರ್ವ 2025" ಆಹಾರ ಮೇಳ ಮತ್ತು ಸಾಂಸ್ಕೃತಿಕ ಮೇಳ ಉದ್ಘಾಟನೆ


ಸುರತ್ಕಲ್: ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಸುರತ್ಕಲ್ ಬಂಟರ ಭವನದ ಆವರಣದಲ್ಲಿ ನಡೆದ  "ಪರ್ವ 2025" ಸಮಾರಂಭದಲ್ಲಿ ಆಹಾರ ಮೇಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜರಗಿತು.

ಕಾರ್ಯಕ್ರಮವನ್ನು ಮಧು ಕನ್ ಸ್ಟ್ರಕ್ಷನ್ ಮತ್ತು ಅಟೊಮ್ ಫಿಟ್ನೆಶ್ ಕ್ಲಬ್ ಸಂಸ್ಥೆಯ ಮಾಲಕಿ ವಿಜಯಲಕ್ಷ್ಮಿ ಮಲ್ಲಿ ಅವರು ವೇದಿಕೆಯಲ್ಲಿ ದೋಸೆ ಮಾಡುವ ಮೂಲಕ  ಉದ್ಘಾಟಿಸಿದರು.

ನಮ್ಮ ಜೀವನದಲ್ಲಿ ಆಹಾರಕ್ಕಿಂತ ದೊಡ್ಡ ಶಕ್ತಿ ಯಾವುದೂ ಇಲ್ಲ. ಆಹಾರವೇ ದೇಹಕ್ಕೆ ಶಕ್ತಿ. ನಮ್ಮ ಪೂರ್ವಜರು ಹೇಳಿದಂತೆ ಊಟ ಔಷಧಿ ಆಗಬೇಕೇ ಹೊರತು ಔಷಧಿ ಊಟ ಆಗಬಾರದು. ಆಹಾರ ಮೇಳವು ಕೇವಲ ಆಹಾರದ ಪ್ರದರ್ಶನವಲ್ಲ, ಅಡುಗೆಗೆ ಕೂಡಾ ವೇದಿಕೆಯಾಗಿದೆ ಎಂದು ವಿಜಯಲಕ್ಷ್ಮೀ ಮಲ್ಲಿ ತಿಳಿಸಿದರು. 
ಆಹಾರ ಮೇಳಗಳಂತಹ ಕಾರ್ಯಕ್ರಮಗಳು ವಿವಿಧ ಸಂಸ್ಕೃತಿಗಳ ಆಹಾರಗಳನ್ನು ಪರಿಚಯಿಸುತ್ತದೆ. ರುಚಿಯ ಜೊತೆಗೆ ಆರೋಗ್ಯದ ಅರಿವನ್ನು ಕೂಡಾ ಮೂಡಿಸುತ್ತದೆ ಹಾಗೂ ಜನರನ್ನು ಒಟ್ಟಿಗೆ ಸೇರಿಸುವ ಸೇತುವೆ ಕೂಡಾ ಆಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಮೂಡಬಿದ್ರೆ ಬಂಟರ ಸಂಘದ ಮಹಿಳಾ ಘಟಕದ ಅಧ್ಯೆಕ್ಷೆ ಶೋಭಾ ಎಸ್ ಹೆಗ್ಡೆ ಮಾತನಾಡಿ ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆ ನಿರಂತರ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಜಿಲ್ಲೆಯಲ್ಲಿ ಕ್ರೀಯಾಶೀಲ ಸಂಘಟನೆಯಾಗಿ ಬೆಳೆದಿದೆ. ಬೇರೆ ಬಂಟರ ಸಂಘಗಳ ಮಹಿಳಾ ಸಂಘಟನೆಗಳಿಗೆ ಸ್ಪೂರ್ತಿಯಾಗಿದೆ ಎಂದರು. 

ಮಹಿಳಾ ವೇದಿಕೆಯ ಅಧ್ಯೆಕ್ಷೆ ಸರೋಜ ಟಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಮಹಿಳಾ ವೇದಿಕೆಯ ಉಪಾಧ್ಯೆಕ್ಷೆ ಜಯಂತಿ ಟಿ ರೈ, ಪ್ರಧಾನ ಕಾರ್ಯದರ್ಶಿ ರಾಜೇಶ್ವರಿ ಡಿ ಶೆಟ್ಟಿ, ಕೋಶಾಧಿಕಾರಿ ಮಾಲತಿ ಜೆ ಶೆಟ್ಟಿ ಉಪಸ್ಥಿತರಿದ್ದರು. ರಾಜೇಶ್ವರಿ ಡಿ ಶೆಟ್ಟಿ ಪ್ರಸ್ತಾವಿಕ ಮಾತನಾಡಿ, ಸ್ವಾಗತಿಸಿದರು.
ಆಶಾಕಿರಣ್ ರೈ ವಂದಿಸಿದರು. ಡಾ ಸುಧಾ ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಬಳಿಕ ವಿಶ್ವಾಸ್ ಮ್ಯೂಸಿಕಲ್ ಮಂಗಳೂರು ತಂಡದಿಂದ "ಸಂಗೀತ ರಸ ಮಂಜರಿ", ಹಾಗೂ ಉಮೇಶ್ ಮಿಜಾರ್ ಸಾರಥ್ಯದ ನಮ್ಮ ಕಲಾವಿದೆರ್ ಬೆದ್ರ ತಂಡದಿಂದ ಹಾಸ್ಯ ನಾಟಕ "ವೈರಲ್ ವೈಶಾಲಿ" ಪ್ರದರ್ಶನ ಗೊಂಡಿತು.
 ಸಂಜೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತರ ತನಕ ಬಗೆಬಗೆಯ ತಿಂಡಿತಿನಿಸುಗಳ ಫುಡ್ ಫೆಸ್ಟಿವಲ್ ನಡೆಯಿತು. ಹಲಸಿನ ಹಣ್ಣು, ಪಪ್ಪಾಯಿ ಹಣ್ಣಿನ ಹೋಳಿಗೆ, ಮರ್ವಾಯಿ ಪುಂಡಿ, ಪುಳಿ ಮುಂಚಿ, ಮೀನಿನ ಖಾದ್ಯ, ಕಟ್ಟದ ಕೋಳಿಯ ಆಹಾರ ಗ್ರಾಹಕರ ಗಮನ ಸೆಳೆಯಿತು. ಪ್ರತೀ ವರ್ಷ ಮಹಿಳಾ ವೇದಿಕೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಗ್ರಾಹಕರು ತಿಳಿಸಿದರು.