ಮಂಗಳೂರಿನಲ್ಲಿ ಮಗುವಿನೊಂದಿಗೆ ತಂದೆ ಆತ್ಮಹತ್ಯೆ ಯತ್ನ - ಪೊಲೀಸ್ ಸಮಯಪ್ರಜ್ಞೆಯಿಂದ ಉಳಿಯಿತು ಎರಡು ಜೀವ
ಮಂಗಳೂರು: ಮಗುವಿನೊಂದಿಗೆ ತಂದೆ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಮಂಗಳೂರಿನ ಪಣಂಬೂರು ಪೊಲೀಸರು ಎರಡು ಜೀವಗಳನ್ನು ಉಳಿಸಿದ್ದಾರೆ.
ಕಾವೂರು ಠಾಣಾ ವ್ಯಾಪ್ತಿಯ ಅಂಬಿಕಾ ನಗರ ನಿವಾಸಿ ರಾಜೇಶ್(35) ಮಂಗಳವಾರ ಸಂಜೆ ಪಣಂಬೂರು ಬೀಚ್‌ಗೆ ಆತ್ಮಹತ್ಯೆಗೆ ಬಂದಿದ್ದನು. ಸಮುದ್ರ ತೀರಕ್ಕೆ ಬಂದಿದ್ದ ಈತ ಮಗುವಿನೊಂದಿಗೆ "ನಾವಿಬ್ಬರೂ ಸಾಯೋಣ" ಎಂದು ಹೇಳುತ್ತಾ ವೀಡಿಯೋ ಮಾಡಿದ್ದಾನೆ. ಈ ವಿಡಿಯೋವನ್ನು ಆತ ತನ್ನ ಸಹೋದರಿಗೆ ಕಳುಹಿಸಿದ್ದ. ಅವರು ಪೊಲೀಸರಿಗೆ ಕಳುಹಿಸಿದ್ದರು.
ಈ ವೀಡಿಯೋ ಪಣಂಬೂರು ಪೊಲೀಸರಿಗೆ ಸಿಕ್ಕಿದ್ದ ಬಳಿಕ ಅವರು ಕೂಡಲೇ ಬೀಚ್‌ನಲ್ಲಿ ಎಲ್ಲಾ ಕಡೆ ತಂದೆ ಮಗುವನ್ನು ಹುಡುಕಾಡಿದ್ದಾರೆ. ಅಲ್ಲಿ ಅವರು ಸಿಗದಿದ್ದ ಕಾರಣ ಆತನ ಮನೆಯನ್ನು ಹುಡುಕಾಡಿ ಮನೆಯತ್ತ ಬಂದಿದ್ದಾರೆ.
ಪೊಲೀಸ್ ಮನೆಗೆ ಬಂದಾಗ ರಾಜೇಶ್ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದನು. ಇನ್ನೇನು ಆತ ನೇಣು ಹಾಕಿಕೊಳ್ಳಬೇಕು ಎನ್ನುವಾಗ ಪೊಲೀಸ್ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬಾಗಿಲು ಮುರಿದು ಆತನನ್ನು, ಆತನ ಪುತ್ರಿಯನ್ನು ರಕ್ಷಿಸಿದ್ದಾರೆ. ಬಳಿಕ ಇಬ್ಬರನ್ನೂ ಕಾವೂರು ಠಾಣೆಯ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪೊಲೀಸರು ಆತನಿಗೆ ತಿಳಿಹೇಳಿ ಮನೆಗೆ ಕಳುಹಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ವಿಡಿಯೋ ಸಿಕ್ಕಿದ್ದರಿಂದ ಪಣಂಬೂರು ಪೊಲೀಸರ ತಂಡವು ಎಲ್ಲಾ ಬೀಚ್ ಮತ್ತು ಎಲ್ಲಾ ಸ್ಥಳಗಳಲ್ಲಿ ಇವರನ್ನು ಹುಡುಕುವಲ್ಲಿ ಕಾರ್ಯನಿರತವಾಗಿತ್ತು. ಪೊಲೀಸರು ಅವರನ್ನು ರಕ್ಷಿಸಲು ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬಂದಿದ್ದರಿಂದ ಅವನು ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ತೋರುತ್ತದೆ ಮತ್ತು ಅವನು ಆ ಸ್ಥಳದಿಂದ ಹೊರಟುಹೋದನು. ನಂತರ ಅವರು ಮನೆಗೆ ಹೋಗಿ ಅವನ ಮನೆಯಲ್ಲಿ ನೇಣು ಬಿಗಿದುಕೊಳ್ಳುತ್ತಿರುವ ಸಂದರ್ಭದಲ್ಲಿ ಪೊಲೀಸರು ಮನೆಗೆ ಹೋಗಿ ರಕ್ಷಿಸಿದರು ಎಂದು ತಿಳಿಸಿದರು.
