ವೃದ್ಧರಾದ ತಂದೆ-ತಾಯಿಯನ್ನು ಬೀದಿಗೆ ತಳ್ಳಲೆತ್ನಿಸಿದ ಪುತ್ರನಿಗೆ ನ್ಯಾಯಾಲಯ ನೀಡಿತ್ತು ಮಹತ್ವದ ಶಿಕ್ಷೆ



ಮಹಾರಾಷ್ಟ್ರ: ವೃದ್ಧ ತಂದೆ-ತಾಯಿಯನ್ನು ನೋಡಿಕೊಳ್ಳದ ಪುತ್ರನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಪೋಷಕರಿಂದ ಆಸ್ತಿ ಪಡೆದು ಅವರನ್ನು ಮನೆಯಿಂದ ಹೊರಹಾಕಲು ಯತ್ನಿಸಿದ ಆರೋಪದ ಮೇಲೆ, ಹಿರಿಯ ನಾಗರಿಕರ ಕಾಯ್ದೆ-2007ರ ಅಡಿಯಲ್ಲಿ ಮಹಾರಾಷ್ಟ್ರದ ಜುನ್ನತ್‌ನ ಜಿಲ್ಲಾ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.

ವೃದ್ಧ ತಂದೆ ತಾಯಿಯನ್ನು ನೋಡಿಕೊಳ್ಳದ ಪುತ್ರನಿಗೆ 3 ತಿಂಗಳು ಜೈಲುವಾಸ ಹಾಗೂ 5,000 ರೂ. ದಂಡ ವಿಧಿಸಿ ಮಹಾರಾಷ್ಟ್ರದ ಜುನ್ನತ್‌ನ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ಇದರೊಂದಿಗೆ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

ಇಬ್ಬರೂ ಮಕ್ಕಳು ತಮ್ಮ ಕೃಷಿಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಮೂಲಭೂತ ಆವಶ್ಯಕತೆಗಳನ್ನೂ ಒದಗಿಸದೆ ಮನೆಯಿಂದ ಹೊರಹಾಕಲು ಮುಂದಾಗಿದ್ದಾರೆ. ಸಣ್ಣ ಮಗ ನಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಮಾತು ಕೊಟ್ಟಿದ್ದರಿಂದ 51ಗುಂಟೆ ಜಾಗವನ್ನು ಅವನ ಹೆಸರಿಗೆ ಮಾಡಿದ್ದೆವು. ಆದರೆ ಆತನೂ ಹೊರದಬ್ಬಿದ್ದಲ್ಲದೆ, ಹಣವನ್ನೂ ಪೀಕಿದ್ದಾನೆ’ ಎಂದು 70 ವರ್ಷದ ವೃದ್ಧ ದಂಪತಿ 2023ರ ಮೇ 13ರಂದು ನಾರಾಯಣಗಾಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ವೇಳೆ ಚಿಕ್ಕ ಪುತ್ರನ ನಡವಳಿಕೆ ಆಕ್ಷೇಪಾರ್ಹ ಎಂಬುದು ಸಾಬೀತಾಗಿದೆ. ಈ ಹಿನ್ನೆಲೆ ನ.10ರಂದು ಆತನನ್ನು ಬಂಧಿಸಿ ಯೆರವಾಡ ಜೈಲಿಗೆ ಕಳಿಸಲಾಗಿದೆ. ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಹಿತ ಕಾಯ್ದೆ-2007ರ ಅಡಿಯಲ್ಲಿ 3 ತಿಂಗಳು ಜೈಲು, 5,000 ರು. ದಂಡ ವಿಧಿಸಲಾಗಿದೆ.