ಭೀಕರ ರಸ್ತೆ ಅಪಘಾತ: 20 ಮಂದಿ ದುರ್ಮರಣ, ಹಲವರಿಗೆ ಗಂಭೀರ ಗಾಯ
ತೆಲಂಗಾಣ: ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಇಪ್ಪತ್ತು ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಆರ್‌ಟಿಸಿ ಬಸ್ ಮತ್ತು ಟಿಪ್ಪರ್ ಮಧ್ಯೆ ಈ ಅಪಘಾತ ನಡೆದಿದೆ. ಚೆವೆಲ್ಲಾ ತಾಲೂಕಿನ ಮಿರಾಜಗುಡಾ ಬಳಿ ಆರ್‌ಟಿಸಿ ಬಸ್ ಮೇಲೆ ಟಿಪ್ಪರ್‌ನಲ್ಲಿದ್ದ ಜಲ್ಲಿಕಲ್ಲು ಬಿದ್ದ ಪರಿಣಾಮ 20 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಯಾಣಿಕರು ಜಲ್ಲಿಕಲ್ಲಿನ ಅಡಿ ಸಿಲುಕಿದ್ದ ಪರಿಣಾಮ ಸ್ಥಳದಲ್ಲೇ ಇಪ್ಪತ್ತು ಮಂದಿ ಅಸುನೀಗಿದ್ದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಜೆಸಿಬಿಯಿಂದ ಜಲ್ಲಿಕಲ್ಲಿನಡಿ ಸಿಲುಕಿದವರನ್ನು ರಕ್ಷಿಸಿದರು.
ಅಪಘಾತಕ್ಕೀಡಾದ ಬಸ್ ತಾಂಡೂರ್‌ನಿಂದ ಹೈದರಾಬಾದ್ ಕಡೆ ತೆರಳುತಿತ್ತು. ಇದರಲ್ಲಿ 70 ಮಂದಿ ಪ್ರಯಾಣಿಕರಿದ್ದು, ಬಹುತೇಕರು ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು. ವಿದ್ಯಾರ್ಥಿಗಳೆಲ್ಲರೂ ಹೈದರಾಬಾದ್ ನ ವಿವಿಧ ಕಾಲೇಜುಗಳಲ್ಲಿ ಓದುತ್ತಿದ್ದವರಾಗಿದ್ದಾರೆ. ಭಾನುವಾರ ರಜಾ ದಿನವಾಗಿದ್ದರಿಂದ ಅವರೆಲ್ಲರೂ ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು. ಇಂದು ಹೈದರಾಬಾದ್‌ಗೆ ವಾಪಸ್ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ ಭೀಕರ ಅಪಘಾತದಿಂದಾಗಿ ಹೈದರಾಬಾದ್-ಬಿಜಾಪುರ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಚೆವೆಲ್ಲಾ-ವಿಕಾರಾಬಾದ್ ಮಾರ್ಗದಲ್ಲಿ ಹೆಚ್ಚಿನ ವಾಹನಗಳನ್ನು ನಿಲ್ಲಿಸಲಾಗಿತ್ತು.
ರಸ್ತೆ ಅಪಘಾತದ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿಷಾದ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ತಕ್ಷಣ ತೆರಳಿ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಆದೇಶಿಸಿದರು. ರಕ್ಷಣಾ ಕ್ರಮಗಳನ್ನು ತೀವ್ರಗೊಳಿಸುವಂತೆ ಸಿಎಂ ಅವರು ರಂಗಾರೆಡ್ಡಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಅಪಘಾತದ ವಿವರಗಳನ್ನು ತಕ್ಷಣ ತಿಳಿಸುವಂತೆ ಮತ್ತು ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆಯನ್ನು ನೀಡುವಂತೆ ರೇವಂತ್ ರೆಡ್ಡಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ನಿರ್ದೇಶನ ನೀಡಿದ್ದಾರೆ. ಗಾಯಾಳುಗಳನ್ನು ಹೈದರಾಬಾದ್‌ಗೆ ಸ್ಥಳಾಂತರಿಸಿ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಮತ್ತು ಘಟನೆ ನಡೆದ ಸ್ಥಳಕ್ಕೆ ಸಾರಿಗೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸುವಂತೆಯೂ ಹೇಳಿದ್ದಾರೆ.
