ಮಧ್ಯರಾತ್ರಿ ಪ್ರಿಯಕರನನ್ನು ಮನೆಗೆ ಕರೆತಂದ ಅಪ್ರಾಪ್ತೆ- ವಿರೋಧಿಸಿದ ಹೆತ್ತವ್ವೆಯನ್ನೇ ಕೊಲೆಗೈದ ಕಟುಕಿ



ಬೆಂಗಳೂರು: ಪದೇಪದೇ ಮನೆಗೆ ಬರುತ್ತಿದ್ದ ಪ್ರಿಯಕರ ಮತ್ತು ಇತರ ಸ್ನೇಹಿತರ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ 17 ವರ್ಷದ ಪುತ್ರಿ ಪ್ರಿಯಕರ ಹಾಗೂ ಸ್ನೇಹಿತರ ಜೊತೆಗೂಡಿ ತನ್ನ ತಾಯಿಯನ್ನು ಕೊಲೆಗೈದ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರದ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ಸುಬ್ರಮಣ್ಯಪುರ ಬಳಿಯ ಉತ್ತರಹಳ್ಳಿ ನಿವಾಸಿ ನೇತ್ರಾವತಿ (34) ಮೃತ ಮಹಿಳೆ.

ಉತ್ತರಹಳ್ಳಿ ನಿವಾಸಿ ಮೃತ ನೇತ್ರಾವತಿ 'ವಿ ನೆಸ್ಟ್' ಎಂಬ ಸಾಲ ವಸೂಲಾತಿ ಕಂಪೆನಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಪತಿಯಿಲ್ಲ. ಇವರ 17ರ ಪುತ್ರಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಆತನನ್ನು ಆಗಾಗ ಮನೆಗೆ ಕರೆತರುತ್ತಿದ್ದಳು. ಇದಕ್ಕೆ ನೇತ್ರಾವತಿ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದರು. ಅಕ್ಟೋಬರ್ 25ರಂದು  ರಾತ್ರಿ, ಪುತ್ರಿ ತನ್ನ ಪ್ರಿಯಕರ ಸೇರಿ ಆತನ ಮೂವರು ಸ್ನೇಹಿತರನ್ನೂ ಮನೆಗೆ ಕರೆತಂದಿದ್ದಳು. ರಾತ್ರಿ 11 ಗಂಟೆಗೆ ಎಚ್ಚರಗೊಂಡ ತಾಯಿ ನೇತ್ರಾವತಿ, ಪುತ್ರಿಯ ಕೋಣೆಯಲ್ಲಿ ನಾಲ್ವರು ಯುವಕರು ಇದ್ದು, ನಗುತ್ತಿರುವುದು, ಮಾತಾಡುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.

ತಕ್ಷಣವೇ ಮಗಳನ್ನು ತರಾಟೆಗೆ ತೆಗೆದುಕೊಂಡು, ಯುವಕರನ್ನು ಮನೆಯಿಂದ ಹೊರಗೆ ಹೋಗುವಂತೆ ಎಚ್ಚರಿಸಿದ್ದಾರೆ. ಅವರು ಹೋಗಲು ನಿರಾಕರಿಸಿದ್ದಾರೆ. ಈ ವೇಳೆ ಆಕೆ ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ತಾಯಿಯ ಎಚ್ಚರಿಕೆಯಿಂದ ಕೋಪಗೊಂಡ ಪುತ್ರಿ, ಪ್ರಿಯಕರ ಮತ್ತು ಸ್ನೇಹಿತರೊಂದಿಗೆ ಸೇರಿ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾಳೆ. ನೇತ್ರಾವತಿಯ ಬಾಯಿಯನ್ನು ಬಲವಂತವಾಗಿ ಮುಚ್ಚಿ, ಟವೆಲ್‌ನಿಂದ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ, ಆತ್ಮಹತ್ಯೆ ಎಂದು ಬಿಂಬಿಸಲು, ನೇತ್ರಾವತಿಯ ಕುತ್ತಿಗೆಗೆ ಸೀರೆಯನ್ನು ಬಿಗಿದು ಫ್ಯಾನ್‌ಗೆ ನೇಣು ಹಾಕಿ, ಪುತ್ರಿ ಸೇರಿದಂತೆ ಎಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ.

ನೇತ್ರಾವತಿಯವರ ಸೋದರಿ ಅನಿತಾ ಮರುದಿನ ಹಲವು ಬಾರಿ ಕರೆ ಮಾಡಿದರೂ ಆಕೆ ಸ್ವೀಕರಿಸಿರಲಿಲ್ಲ. ಪುತ್ರಿಗೂ ಕರೆ ಮಾಡಿದರೆ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಅನುಮಾನಗೊಂಡು ಮನೆಗೆ ಬಂದು ನೋಡಿದಾಗ, ನೇತ್ರಾವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆರಂಭದಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿತ್ತು.

ತಾಯಿಯ ಅಂತ್ಯಸಂಸ್ಕಾರಕ್ಕೂ ಪುತ್ರಿ ಬಂದಿರಲಿಲ್ಲ. ಆಕೆಯ ನಾಪತ್ತೆ ಪ್ರಕರಣಕ್ಕೆ ಮತ್ತಷ್ಟು ತಿರುವು ಕೊಟ್ಟಿತ್ತು. ತಕ್ಷಣವೇ ತಂಗಿಯ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಿ, ನೇತ್ರಾವತಿ ಸಾವಿನ ಹಿಂದೆ ಆಕೆಯ ಪಾತ್ರವಿರಬಹುದು ಎಂಬ ಅನುಮಾನವನ್ನು ಪೊಲೀಸರ ಮುಂದೆ ಹೇಳಿದ್ದರು.

ಪ್ರಕರಣವನ್ನು ಗಂಭೀರ ಪರಿಗಣಿಸಿ ತನಿಖೆ ಶುರು ಮಾಡಿದ ಪೊಲೀಸರು ನೇತ್ರಾವತಿ ಮಗಳ ಪ್ರಿಯಕರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆ ವೇಳೆ ಕೊಲೆಗೆ ಕಾರಣ ಬಾಯ್ಬಿಟ್ಟಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯಡಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಅಪ್ರಾಪ್ತ ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಆರೋಪಿಗಳೆಲ್ಲರೂ 16 ರಿಂದ 17 ವರ್ಷ ವಯಸ್ಸಿನ ಅಪ್ರಾಪ್ತರಾಗಿದ್ದು, ಎಲ್ಲರೂ ಶಾಲೆಯಿಂದ ಹೊರಗುಳಿದವರಾಗಿದ್ದಾರೆ.