ಈ ಗ್ರಾಮಗಳಲ್ಲಿ ಕಿವಿಯೋಲೆ, ಮೂಗುತಿ, ತಾಳಿ ಬಿಟ್ಟು ಬೇರೆ ಆಭರಣ ಧರಿಸಿದರೆ ಬೀಳುತ್ತೆ ದಂಡ
ವಿಕಾಸ್ ನಗರ(ಉತ್ತರಾಖಂಡ): ದೇವಭೂಮಿ ಎಂದು ಕರೆಯಲ್ಪಡುವ ಉತ್ತರಾಖಂಡ ರಾಜ್ಯ ಸಾಂಪ್ರದಾಯಿಕ ಉಡುಪು ಮತ್ತು ಆಭರಣಗಳಿಗೂ ಹೆಸರುವಾಸಿ. ಶುಭ ಸಂದರ್ಭಗಳಲ್ಲಿ ಮಹಿಳೆಯರು ತಮ್ಮನ್ನು ಚೆಂದವಾಗಿ ಅಲಂಕರಿಸಿಕೊಳ್ಳುತ್ತಾರೆ. ಆದರೆ, ವಿಕಾಸ್ ನಗರ-ಜೌನ್ಸರ್ ಬವಾರ್ ಪ್ರದೇಶದ ಕಾಂದಾಡ್ ಮತ್ತು ಇಂದ್ರೋಲಿ ಗ್ರಾಮಗಳು ಮೂರು ವಿಧದ ಚಿನ್ನಾಭರಣವನ್ನು ಮಾತ್ರ ಧರಿಸುವ ನಿರ್ಬಂಧ ವಿಧಿಸಿಕೊಂಡಿವೆ.
ಗ್ರಾಮಗಳ ಈ ನಿರ್ಧಾರವು ದೊಡ್ಡ ಸದ್ದು ಮಾಡಿದೆ. ಇತ್ತೀಚೆಗೆ ಕಾಂದಾಡ್ ಗ್ರಾಮದಲ್ಲಿ ನಡೆದ ಪಂಚಾಯತ್ ಸಭೆಯಲ್ಲಿ ಮಹಿಳೆಯರು ಮದುವೆ ಮತ್ತು ಶುಭ ಕಾರ್ಯಕ್ರಮಗಳಲ್ಲಿ ಕೇವಲ ಮೂರು ಚಿನ್ನದ ಆಭರಣಗಳನ್ನು ಮಾತ್ರ ಧರಿಸಬೇಕೆಂದು ನಿರ್ಧರಿಸಲಾಯಿತು. ಇದನ್ನು ಉಲ್ಲಂಘಿಸುವವರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಲು ಸಹ ಒಪ್ಪಿಗೆ ನೀಡಲಾಯಿತು.
ಗ್ರಾಮಸ್ಥರ ಸಾಮೂಹಿಕ ನಿರ್ಧಾರವು ವ್ಯಾಪಕ ಚರ್ಚೆಗೆ ಒಳಗಾಗಿದೆ. ಈ ವಿಷಯದ ಬಗ್ಗೆ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲು ಗ್ರಾಮಕ್ಕೆ ಭೇಟಿ ನೀಡಿ ಸಾಕ್ಷಾತ್ ಮಾಹಿತಿ ಸಂಗ್ರಹಿಸಲಾಯಿತು.
ಈ ನಿರ್ಧಾರದ ಹಿಂದಿನ ಉದ್ದೇಶವೇನು?: ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ಜೌನ್ಸರ್ ಬವಾರ್ ಬುಡಕಟ್ಟು ಪ್ರದೇಶವು ತನ್ನ ವಿಶಿಷ್ಟ ಸಂಪ್ರದಾಯ ಮತ್ತು ಜಾನಪದ ಸಂಸ್ಕೃತಿಯಿಂದ ಶ್ರೀಮಂತವಾಗಿದೆ. ಕಾಲಕಾಲಕ್ಕೆ ಗ್ರಾಮ ಪಂಚಾಯತ್ಗಳು ಸಾಮಾಜಿಕ ಸುಧಾರಣಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ. ಅಕ್ಟೋಬರ್ 16ರಂದು ನಡೆದ ಸಭೆಯಲ್ಲಿ ಮಹಿಳೆಯರು ಕಿವಿಯೋಲೆ, ಮಂಗಳಸೂತ್ರ ಮತ್ತು ಮೂಗುತಿಯನ್ನು ಮಾತ್ರ ಧರಿಸಬೇಕು ಎಂಬ ನಿರ್ಧಾರ ತಳೆಯಲಾಗಿದೆ.
ಸಮಾಜದಲ್ಲಿ ಹೆಚ್ಚುತ್ತಿರುವ ಆಡಂಬರದ ಪ್ರವೃತ್ತಿ ತಡೆಯುವುದು ಮತ್ತು ಆರ್ಥಿಕ ಅಸಮಾನತೆಯ ಭಾವನೆಯನ್ನು ನೀಗಿಸುವುದು ಈ ನಿರ್ಧಾರದ ಹಿಂದಿನ ಗುರಿಯಾಗಿದೆ. ಕೆಲವು ಮಹಿಳೆಯರು ಕಾರ್ಯಕ್ರಮಗಳಿಗೆ ಮಣಭಾರದ ಚಿನ್ನಾಭರಣಗಳನ್ನು ಧರಿಸುತ್ತಾರೆ. ಆರ್ಥಿಕವಾಗಿ ದುರ್ಬಲವಾದ ಕುಟುಂಬಗಳ ಮೇಲೆ ಇದು ಪರಿಣಾಮ ಬೀರುತ್ತಿದೆ.
ನಿರ್ಧಾರ ಸ್ವಾಗತಿಸಿದ ಮಹಿಳೆಯರು: ಮೂರು ವಿಧದ ಚಿನ್ನದ ಆಭರಣಗಳನ್ನು ಧರಿಸುವ ನಿರ್ಬಂಧವನ್ನು ಸ್ಥಳೀಯ ಮಹಿಳೆಯರು ಸ್ವಾಗತಿಸಿದ್ದಾರೆ. ಪಂಚಾಯನ್ನ ನಿರ್ಧಾರ ಒಳ್ಳೆಯದು. ನಮಗೆ ಯಾವುದೇ ಆಕ್ಷೇಪಣೆಗಳಿಲ್ಲ. ಕೆಲವು ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಆಭರಣ ಧರಿಸಿಕೊಂಡು ಪ್ರದರ್ಶನ ಮಾಡುತ್ತಾರೆ. ಇದು ಇಲ್ಲದವರ ಮೇಲೆ ಪ್ರಭಾವ ಬೀರುತ್ತದೆ. ಹಳ್ಳಿಯ ಎಲ್ಲಾ ಮಹಿಳೆಯರು ಒಂದೇ ರೀತಿ ಕಾಣುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎನ್ನುತ್ತಾರೆ ಸ್ಥಳೀಯ ಮಹಿಳೆಯರು.
"ಚಿನ್ನ ಇತ್ತೀಚೆಗೆ ತುಂಬಾ ದುಬಾರಿಯಾಗಿದೆ. ಮೊದಲು, ಮಹಿಳೆಯರು ಕಿವಿಯೋಲೆ, ಮೂಗುತಿ ಮತ್ತು ಮಂಗಳಸೂತ್ರವನ್ನು ಧರಿಸುತ್ತಿದ್ದರು. ಕಾಲಾನಂತರದಲ್ಲಿ ಈ ಸಂಸ್ಕೃತಿ ಬದಲಾಯಿತು. ಕೆಲವು ಬಡ ಕುಟುಂಬಗಳಲ್ಲಿ ಮಹಿಳೆಯರು ಆಭರಣ ಧರಿಸುವುದಿಲ್ಲ. ಸ್ಥಿತಿವಂತ ಕುಟುಂಬಗಳ ಮಹಿಳೆಯರು ಆಭರಣಗಳಿಂದ ಅಲಂಕೃತವಾಗಿರುತ್ತಾರೆ. ಇದು ಸಮಾಜದಲ್ಲಿ ಅಸಮಾನತೆಯನ್ನು ಹೆಚ್ಚಿಸುತ್ತದೆ" ಎಂಬುದು ಗ್ರಾಮಸ್ಥ ಅಂಕಿತ್ ಚೌಹಾಣ್ ಅಭಿಪ್ರಾಯ.
ಕಾಂದಾಡ್ ಗ್ರಾಮದ ಬಲದೇವ್ ಸಿಂಗ್ ಮಾತನಾಡಿ, "ಗ್ರಾಮಸ್ಥರಲ್ಲಿ ಸಿರಿವಂತಿಕೆ ಮತ್ತು ಬಡತನದ ನಡುವಿನ ವ್ಯತ್ಯಾಸವನ್ನು ಅಳಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗ್ರಾಮದಲ್ಲಿ ಕೆಲವು ಜನರು ಹೆಚ್ಚು ಆಭರಣಗಳನ್ನು ಹೊಂದಿದ್ದರೆ, ಇತರರು ಕಡಿಮೆ ಹೊಂದಿದ್ದಾರೆ. ಆದ್ದರಿಂದ, ಮದುವೆ ಮತ್ತು ಇತರ ಶುಭ ಸಮಾರಂಭಗಳಲ್ಲಿ ಎಲ್ಲ ಮಹಿಳೆಯರು ಒಂದೇ ರೀತಿಯ ಆಭರಣ ಧರಿಸಬೇಕು ಎಂಬ ಸಂಪ್ರದಾಯ ಆರಂಭಿಸಲಾಗಿದೆ" ಎಂದರು.
