ವಿದೇಶಕ್ಕೆ ಹೋಗಬೇಕಾದ್ರೆ 60ಕೋಟಿ ರೂ. ಠೇವಣಿ ಇಡಿ- ನಟಿ ಶಿಲ್ಪಾ ಶೆಟ್ಟಿ - ರಾಜ್ ಕುಂದ್ರಾ ದಂಪತಿಗೆ ಮುಂಬೈ ಹೈಕೋರ್ಟ್ ಆದೇಶ
Thursday, October 9, 2025
ಮುಂಬೈ: ವಿದೇಶಕ್ಕೆ ಹೋಗಬೇಕಾದರೆ ಮೊದಲು 60 ಕೋಟಿ ರೂಪಾಯಿ ಠೇವಣಿಯಾಗಿಡಬೇಕು ಎಂದು ಬಾಂಬೆ ಹೈಕೋರ್ಟ್ ಬುಧವಾರ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿಗೆ ರಾಜ್ ಕುಂದ್ರಾಗೆ ನಿರ್ದೇಶಿಸಿದೆ.
ವಿದೇಶ ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ ನ್ಯಾಯಾಲಯ, ಅವರ ವಿರುದ್ಧ ಹೊರಡಿಸಿರುವ ‘ಲುಕೌಟ್ ಸರ್ಕ್ಯುಲರ್’(ಎಲ್‌ಒಸಿ)ನ್ನು ರದ್ದು ಪಡಿಸಲೂ ನಿರಾಕರಿಸಿದೆ.
60 ಕೋಟಿ ರೂ. ವಂಚಿಸಿದ ಆರೋಪದಲ್ಲಿ ತಮ್ಮ ವಿರುದ್ಧ ಮೊಕದ್ದಮೆ ದಾಖಲಾದ ಬಳಿಕ, ತಮ್ಮ ವಿರುದ್ಧ ಹೊರಡಿಸಲಾಗಿರುವ ಎಲ್‌ಒಸಿಯನ್ನು ರದ್ದುಪಡಿಸಬೇಕೆಂದು ಕೋರಿ ದಂಪತಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಿದೆ.
ಮುಂಬೈಯ 60ವರ್ಷದ ಉದ್ಯಮಿ ಹಾಗೂ ಲೋಟಸ್ ಕ್ಯಾಪ್ ಫೈನಾನ್ಶಿಯಲ್ ಸರ್ವಿಸಸ್ ನ ನಿರ್ದೇಶಕ ದೀಪಕ್ ಕೊಠಾರಿ ಎಂಬವರು ಸಲ್ಲಿಸಿದ ದೂರಿನ ಆಧಾರದಲ್ಲಿ ಶಿಲ್ಪಾ ಶೆಟ್ಟಿ ದಂಪತಿ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಈ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸ್ ನ ಆರ್ಥಿಕ ಅಪರಾಧಗಳ ವಿಭಾಗ ನಡೆಸುತ್ತಿದೆ.
ನಾನು ಶಿಲ್ಪಾ ಶೆಟ್ಟಿ ಮತ್ತು ಕುಂದ್ರಾಗೆ ಅವರ ಉದ್ಯಮವನ್ನು ಬೆಳೆಸುವುದಕ್ಕಾಗಿ 2015 ಮತ್ತು 2023ರ ನಡುವೆ ಹಣ ಕೊಡುತ್ತಾ ಬಂದಿದ್ದೇನೆ. ಆದರೆ ಅವರು ಹಣವನ್ನು ತಮ್ಮ ವೈಯಕ್ತಿಕ ವೆಚ್ಚಗಳಿಗೆ ಬಳಸಿಕೊಂಡಿದ್ದಾರೆ ಎಂಬುದಾಗಿ ತನ್ನ ದೂರಿನಲ್ಲಿ ಕೊಠಾರಿ ಆರೋಪಿಸಿದ್ದಾರೆ.
ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ ಎಂಬ ತಮ್ಮ ಕಂಪೆನಿಗೆ 75 ಕೋಟಿ ರೂ. ಸಾಲ ನೀಡುವಂತೆ ಕೋರಿ ಶೆಟ್ಟಿ ಮತ್ತು ಕುಂದ್ರಾ ಓರ್ವ ಮಧ್ಯವರ್ತಿಯ ಮೂಲಕ 2015ರಲ್ಲಿ ನನ್ನನ್ನು ಸಂಪರ್ಕಿಸಿದ್ದರು ಎಂದು ಅವರು ಹೇಳಿದ್ದಾರೆ. ಆ ಕಂಪೆನಿಯು ಆಧುನಿಕ ಜೀವನಕ್ಕೆ ಸಂಬಂಧಿಸಿದ ವಸ್ತುಗಳನ್ನು ಮಾರಾಟ ಮಾಡುತ್ತಿತ್ತು ಮತ್ತು ಆನ್ ಲೈನ್ ಮಾರಾಟ ಸಂಸ್ಥೆಯೊಂದನ್ನೂ ನಡೆಸುತ್ತಿತ್ತು.
ಬಳಿಕ, ಈ ಮೊತ್ತವನ್ನು ಸಾಲವಾಗಿ ಪರಿಗಣಿಸದೆ ‘‘ಹೂಡಿಕೆ’’ ಎಂಬುದಾಗಿ ಪರಿಗಣಿಸುವಂತೆ ದಂಪತಿ ನನಗೆ ಮನವಿ ಮಾಡಿದರು. ಪ್ರತಿ ತಿಂಗಳು ಲಾಭ ನೀಡಲಾಗುವುದು ಮತ್ತು ಅಸಲನ್ನು ಹಿಂದಿರುಗಿಸಲಾಗುವುದು ಎಂದು ಅವರು ಹೇಳಿದರು. 2015 ಎಪ್ರಿಲ್ ನಲ್ಲಿ 31.95 ಕೋಟಿ ರೂ. ಮತ್ತು 2015 ಸೆಪ್ಟಂಬರ್ ನಲ್ಲಿ 28.53 ಕೋಟಿ ರೂ. ಮೊತ್ತವನ್ನು ಬೆಸ್ಟ್ ಡೀಲ್ ಟಿವಿಯ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದೇನೆ ಎಂದಿದ್ದಾರೆ.
ಆದರೆ, ಇನ್ನೊಬ್ಬ ಹೂಡಿಕೆದಾರನಿಗೆ ವಂಚಿಸಿದ ಆರೋಪದಲ್ಲಿ ಕಂಪೆನಿಯ ವಿರುದ್ಧ ದಿವಾಳಿ ಪ್ರಕ್ರಿಯೆ ಆರಂಭವಾಗಿರುವುದು ನನಗೆ ತಿಳಿದು ಬಂತು. ನನ್ನ ಹಣವನ್ನು ವಸೂಲು ಮಾಡುವ ಎಲ್ಲಾ ಪ್ರಯತ್ನಗಳು ವಿಫಲವಾದವು. ದಂಪತಿಯು ಈ ಹಣವನ್ನು ಅಪ್ರಾಮಾಣಿಕತೆಯಿಂದ ವೈಯಕ್ತಿಕ ವೆಚ್ಚಗಳಿಗೆ ಬಳಸಿಕೊಂಡಿದ್ದಾರೆ ಎಂದು ಕೊಠಾರಿ ಆರೋಪಿಸಿದ್ದಾರೆ.